ಶುಕ್ರವಾರ, ಆಗಸ್ಟ್ 18, 2017

ನವಿಲುಗಳ ಸಂಸಾರ.....

ಅದೊಂದು ಪುಟ್ಟ ಕಾಡು.ಆ ಕಾಡಿನಲ್ಲಿ ಮೂರು ನವಿಲುಗಳ ಒಂದು ಪುಟ್ಟ ಸಂಸಾರವಿತ್ತು.ಒಂದು ಅಪ್ಪ ನವಿಲು,ಇನ್ನೊಂದು ಅಮ್ಮ ನವಿಲು ಮತ್ತೊಂದು ಮಗ ನವಿಲು.ಅಪ್ಪ ನವಿಲು ಮತ್ತು ಅಮ್ಮ ನವಿಲುಗಳು ಕಾಡಿನಲ್ಲಿ ನಡೆಯುವ ಉತ್ಸವ ,ಮದುವೆ,ಶುಭಸಮಾರಂಭಗಳಲ್ಲಿ ನಾಟ್ಯವಾಡಿ ಒಂದಿಷ್ಟು ಹಣ ಸಂಪಾದನೆ ಮಾಡಿ ಜೀವನ ನಡೆಸುತ್ತಿದ್ದವು.ಅವುಗಳು ನಾಟ್ಯ ಮಾಡಿ ಹಣಗಳಿಸುತ್ತಿದ್ದರೂ ಅವುಗಳಿಗೆ ಹೆಚ್ಚು ಹಣವೇನು ದೊರೆಯುತ್ತಿರಲಿಲ್ಲ.ಆದ್ದರಿಂದ ಅವು ಹೆಚ್ಚು ಕಡು ಬಡತನವಲ್ಲದಿದ್ದರೂ ,ಸ್ವಲ್ಪ ಬಡತನದ ಜೀವನವನ್ನೇ ನಡೆಸುತ್ತಿದ್ದವು.
ಮಳೆಗಾಲ ಮುಗಿದು ಚಳಿಗಾಲ ಆರಂಭವಾಯಿತು.ಕಾಡಿನಲ್ಲಿ ಎಂದಿನಂತೆ ಈ ಬಾರಿಯೂ ಚಳಿ ಜೋರಾಗಿಯೇ ಇತ್ತು.ನವಿಲುಗಳ ಮನೆ ಪುಟ್ಟದಾಗಿತ್ತು ,ಹಾಗೂ ಅದರ ಮನೆಯ ಕಿಟಕಿಗಳು ಮುರಿದು ಹೋಗಿದ್ದವು.ಕಿಟಕಿಗಳನ್ನು ಸರಿಮಾಡಿಸಲು ಹಣ ಹೊಂದಿಸಲು ಸಾಧ್ಯವಾಗದಿದ್ದರಿಂದ ಮನೆಯ ಒಳಗಡೆಯೂ ಶೀತದ ಗಾಳಿ ಹೆಚ್ಚು ಬೀಸುತಿತ್ತು.
ಈ ಕಾರಣಕ್ಕಾಗಿ ತಾಯಿ ನವಿಲು ಮತ್ತು ತಂದೆ ನವಿಲು ಮಗ ನವಿಲನ್ನು ಮಧ್ಯೆ ಮಲಗಿಸಿಕೊಂಡು ಮಗನಿಗೆ ಚಳಿಯಿಂದ ತೊಂದರೆಯಾಗದಂತೆ ನೋಡಿಕೊಳ್ಳುತ್ತಿದ್ದವು.

ಒಂದು ಬಾರಿ ಮಗ ನವಿಲಿಗೆ ತಾನೂ ದುಡಿದು ಮನೆಯ ಕಿಟಕಿಯನ್ನು ರಿಪೇರಿ ಮಾಡಿಸಬೇಕು ಎಂದು ಅನ್ನಿಸಿತು.ಹಾಗೆ ಯಾರೋ ಸ್ನೇಹಿತರು ಹೇಳಿದ್ದ ಮಾತೂ ನೆನಪಿಗೆ ಬಂದಿತು," ದೂರದ ಕಾಡೊಂದರಲ್ಲಿ ನರ್ತನ ಮಾಡುವ ನವಿಲುಗಳಿಗೆ ಸಾಕಷ್ಟು ಹಣ ಕೊಡುತ್ತಾರೆ " ಎಂದು.ಇದನ್ನು ಯೋಚಿಸಿದ ಮಗ ನವಿಲು," ಅಪ್ಪ ,ಅಮ್ಮನ  ಅಪ್ಪಣೆ ಪಡೆದು ದೂರದ ಕಾಡಿಗೆ ದುಡಿಯಲು ಹೊರಟಿತು.
ಮಗ ನವಿಲು ದೊಡ್ಡ ಕಾಡನ್ನು ತಲುಪಿದ ಮೇಲೆ ಅದರ ವೃತ್ತಿಯನ್ನು ಆರಂಭಿಸಿತು.ಅದರ ನರ್ತನಕ್ಕೆ ಸಾಕಷ್ಟು ದೊರೆಯಿತು.ಮನೆಯ ಕಿಟಕಿಗಳನ್ನು ರಿಪೇರಿ ಮಾಡಿಸುವಷ್ಟು ಹಣ ದೊರೆತ ಮೇಲೆ," ಒಂದು ಪುಟ್ಟ ಮನೆಯನ್ನು ಕಟ್ಟಿಸುವಷ್ಟಾದರೂ ಹಣ ಸಂಪಾದಿಸಬೇಕು " ಎಂದುಕೊಂಡು ಅಲ್ಲೆ ತನ್ನ ವೃತ್ತಿಯನ್ನು ಮುಂದುವರೆಸಿತು." ಒಂದು ಪುಟ್ಟ ಮನೆಯನ್ನು ಕಟ್ಟಿಸುವಷ್ಟು ಹಣ ದೊರೆತ ಮೇಲೆ ,ಒಂದು ದೊಡ್ಡ ಬಂಗಲೆ,ಅರಮನೆ " ಹೀಗೆ ಮಗ ನವಿಲಿನ ಆಲೋಚನೆ ಮುಂದುವರೆದು  ದೊಡ್ಡ ಕಾಡಿನಲ್ಲೇ ಹಣ ಸಂಪಾದನೆ ಮಾಡಲು ನಿಂತಿತು.

ಮಗನವಿಲು ಒಂದು ಬಾರಿ ದೊಡ್ಡ ಕಾಡಿನ ಮದುವೆ  ಛತ್ರದಲ್ಲಿ ಕಾರ್ಯಕ್ರಮವನ್ನು ನಡೆಸಿಕೊಡುತ್ತಿತ್ತು.ಅಂದು ಸಂಜೆ ಸ್ವಲ್ಪ ತಡವಾಗಿದ್ದರಿಂದ ಛತ್ರದ ಒಂದು ಕೋಣೆಯಲ್ಲಿ ತಂಗಿತು.ಚಳಿಗಾಲವಾದ್ದರಿಂದ  ಮಗ ನವಿಲಿಗೆ ಬಹಳ ಚಳಿಯಾಗುತ್ತಿತ್ತು ಹಾಗೂ ನವಿಲು ಮಲಗಿದ್ದ ಕೋಣೆಯ ಕಿಟಕಿಗಳ ಚಿಲಕ ಮುರಿದು ಹೋಗಿದ್ದರಿಂದ ನವಿಲಿಗೆ ಚಳಿ ತಡೆಯಲೆ ಆಗಲಿಲ್ಲ.ಆಗ ನವಿಲಿಗೆ ತನ್ನ ಹಳೆಯ ಮನೆಯೂ ,ತಾನು ಬಂದ ಕಾರ್ಯದ ಉದ್ದೇಶವನ್ನು ನೆನಪಿಗೆ ತಂದುಕೊಂಡಿತು.ಆ ರಾತ್ರಿಯೇ ತನ್ನ ಪುಟ್ಟ ಕಾಡಿಗೆ ಆಪ್ಪ,ಅಮ್ಮನ ನೆನೆದು ಓಡಿತು.

ಆದರೆ ಏನು ಮಾಡುವುದು? ಮಗ ನವಿಲು ಬಂದಾಗ ಆಚೆ ಈಚೆ ಮನೆಯವರು ಹೇಳಿದರು " ನಿಮ್ಮಪ್ಪ ಸತ್ತು ಆರು ತಿಂಗಳಾಗಿತ್ತು,ನಿಮ್ ಅಮ್ಮ ನನ್ ಮಗ್ ಬರ್ತಾನೆ ಅಂತಾ,ಕಾಯ್ತಾ ,ಕಾಯ್ತಾ ನಿನ್ನೆಯಷ್ಟೆ ಪ್ರಾಣ ಬಿಟ್ಳು " ಎಂದರು.
ಮಗ ನವಿಲು ತಾನು ತಂದಿದ್ದ ಹಣವನ್ನು ಕೈಯಲ್ಲೇ ಹಿಡಿದು ಮನೆಯ ಕಿಟಕಿಯನ್ನೊಮ್ಮೆ ನೋಡಿತು.


ಅಭಿಲಾಷ್ ಟಿ ಬಿ
ತಿಪಟೂರು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ