ಶುಕ್ರವಾರ, ಆಗಸ್ಟ್ 18, 2017

ವಿಜಯದಶಮಿ.......

ಎಂತಹ ಘೋರಯುದ್ಧ, ಹೇಮಾದ್ರಿಯ ಮಹಾರಾಜ ವೀರಸಿಂಹ ನಲುಗಿಹೋದ.ಎಂತೆಂತ ಯುದ್ಧಗಳನ್ನು ಜಯಗಳಿಸಿದ್ದ ವೀರಸಿಂಹನಿಗೆ ಎಲ್ಲಿಲ್ಲದ ಭೀತಿ ಶುರುವಾಯಿತು.ಶತ್ರುದೇಶದ ಸೇನೆ ಬಹಳ ಸಂಖ್ಯೆಯಲ್ಲಿ ನೋವುಂಡಿದ್ದರೂ ,ವೀರಸಿಂಹನ ಸೇನೆ ಅದರ ಎರಡರಷ್ಟು ನೋವನ್ನು  ಅನುಭವಿಸಿತ್ತು  .ಪಟ್ಟದ ಆನೆ,ಕುದುರೆ ಮೃತವಾದವು,ಮೂರು ನಾಲ್ಕು. ಸೇನಾಧಿಕಾರಿಗಳು ಶತ್ರುಗಳ ದ್ವೇಷದ ಬಾಣಕ್ಕೆ ಬಲಿಯಾದರು.ಗಡಿಗ್ರಾಮದಿಂದ ಶತ್ರು ದೇಶದ ರಾಜನಿಂದ ಯುದ್ಧಕ್ಕೆ ಆಹ್ವಾನ ಬಂದಾಗಲೂ ವೀರಸಿಂಹ ಧೃತಿಗೆಟ್ಟಿರಲಿಲ್ಲ.ಮೇಲಾಗಿ ರಣರಂಗಕ್ಕೆ ಹೊರಡುವ ಸಮಯದಲ್ಲಿ ಕುಲದೇವತೆ ಚಾಮುಂಡೇಶ್ವರಿಯ ಮಂಟಪಕ್ಕೆ ಹೋದಾಗಲೂ ಬಲ ಪ್ರಸಾದವನ್ನು ಕೊಟ್ಟಿದ್ದಳು.ಆದರೆ ಈಗ ಹೇಮಾದ್ರಿ ಶತ್ರು ದೇಶದ ಸ್ವತ್ತಾಗುವ ಸಮಯ ಬಂದಾಗಿದೆ.ವೀರ ಸಿಂಹ ಚಿಂತಾಕ್ರಾಂತನಾಗಿದ್ದಾನೆ.


"ನನ್ನ ರಾಜ್ಯವನ್ನು ಕಾಪಾಡಿಕೊಳ್ಳಬೇಕು,ನನ್ನ ಪ್ರಜೆಗಳನ್ನು ಕಾಪಾಡಿಕೊಳ್ಳಬೇಕು...ಎಲ್ಲಿ ಕಾಪಾಡಿಕೊಳ್ಳುವುದು...ವೀರಭದ್ರರಂತೆ ಇದ್ದ ಸೇನಾಧಿಕಾರಿಗಳು ಹತರಾದರು,ಪಟ್ಟದಾನೆ ,ಪಟ್ಟದ ಕುದುರೆ ವೀರಮರಣ ಹೊಂದಿಯಾಯಿತು.ಜಗಜ್ಜನನಿ ,ಸತ್ತರೆ ವೀರಮರಣ,ಗೆದ್ದರೆ ನಾಳೆಯೇ ವಿಜಯದಶಮಿ " ಎಂದು ಕುಲದೇವತೆಯಾದ ಚಾಮುಂಡೇಶ್ವರಿಗೆ ವಂದಿಸಿ ,ದೇವಾಲಯದಿಂದ ಹೊರಬರುತ್ತಿರಲು,ಹೆಂಗಸೊಬ್ಬಳು ಕೈಯಲ್ಲಿ ಒಂದು ಹಸು ಮತ್ತು ಅದರ ಕರುವನ್ನು ಹಿಡಿದುಕೊಂಡು ರಾಜನ ಮುಂದೆ ಪ್ರತ್ಯಕ್ಷಲಾದಳು.

ಎದುರುಬಂದ ಹೆಂಗಸು ರಾಜನಿಗೆ "ಮಹಾರಾಜ,ನನ್ನ ಹೆಸರು ಗೌರಮ್ಮನೆಂದು ,ಈ ದೇವಾಲಯಕ್ಕೆ ಕೆತ್ತನೆ ಕೆಲಸ ಮಾಡುತ್ತಿರುವ ಶಿವಪ್ಪನ ಹೆಂಡತಿಯೆಂದು ಪರಿಚಯಿಸಿಕೊಂಡು, ಮಹಾರಾಜ,ಇಂದು ರಾಜ್ಯಕ್ಕೆ ವಿಪತ್ತು ಬಂದೊದಗಿದೆ.ಈಗಿರುವ ಪರಿಸ್ಥಿತಿಯಲ್ಲಿ ಯುದ್ಧವನ್ನು ಗೆಲ್ಲಲಂತು  ಅಸಾಧ್ಯವಾದ ಮಾತು.ಆದ್ದರಿಂದ ಸಧ್ಯದ ಪರಿಸ್ಥಿತಿಯಲ್ಲಿ ಶತ್ರುಗಳನ್ನು ಅವರ ರಾಜ್ಯಕ್ಕೆ ಹಿಮ್ಮೆಟ್ಟಿಸಿದರೆ ನಾವು ನಾಳೆಯೇ ವಿಜಯದಶಮಿಯನ್ನು ಆಚರಿಸಬಹುದು.ಆದ್ದರಿಂದ ನಿನಗೊಂದು ಸಲಹೆಯನ್ನು ಕೊಡುವೆ,.......ನೀನೂ ಕೂಡ ಪುಣ್ಯಕೋಟಿಯ ಕತೆಯನ್ನು ಕೇಳಿರುವೆ,ಅಂತ ವ್ಯಾಘ್ರನೇ ಬೆಟ್ಟದ ಮೇಲಿಂದ ಬಿದ್ದು ಸತ್ತಿತ್ತು,ಪುಣ್ಯಕೋಟಿಯನ್ನು ತಿಂದರೆ ಪರಮಾತ್ಮ ಮೆಚ್ಚನೆಂದು.ಎಂತಹ ದುಷ್ಟರಿಗಾದರೂ ಗೋವನ್ನು ಕಂಡರೆ ಕರುಣೆಯುಂಟಾಗುವುದು ,ಯಾರು ಸಹ ಅದರ ಮೇಲೆ ದಾಳಿಯಾಗಲಿ,ಕೈಯನ್ನು ಸಹ ಎತ್ತುವುದಿಲ್ಲ.ಆದ್ದರಿಂದ ಈಗಲೇ ಈ ರಾಜ್ಯದಲ್ಲಿರುವ ಗೋವುಗಳನ್ನು ಮುನ್ನೆಡಿಸಿಕೊಂಡು ಯುದ್ಧಭೂಮಿಗೆ ಹೊರಡು ,ಮಿಕ್ಕಿದೆಲ್ಲವನ್ನು ಆ ಜಗಜ್ಜನನಿಗೆ ಬಿಡೋಣ " ಎಂದು ಹೇಳಿದಳು.

ವೀರಸಿಂಹನಿಗೂ ಅವಳ ಮಾತು ಸತ್ಯವೆಂದು ತೋರಿತು.ಈಗಿನ ಪರಿಸ್ಥಿತಿಯಲ್ಲಿ ಶತ್ರುಗಳನ್ನು ಹಿಮ್ಮೆಟಿಸಿದರೆ ಯುದ್ಧ ಗೆದ್ದಂತಯೇ ಸರಿ ಎಂದು ಯೋಚಿಸಿ ,ಅವಳು ಹೇಳಿದಂತೆ ತನ್ನ ರಾಜ್ಯದ ಏಲ್ಲ ಗೋವುಗಳನ್ನು ಕಲೆಹಾಕಿಕೊಂಡು,ಯುದ್ಧ ಭೂಮಿಗೆ ಬಂದನು.ಶತ್ರು ಪಾಳಯ ಗಲಿಬಿಲಿಗೊಂಡಿತು.ಲಕ್ಷಕ್ಕೂ ಮೀರಿ ಬರುತ್ತಿದ್ದವು ಗೋವುಗಳು,ಹಾಲು ಕರೆಯುವ ಹಸುಗಳು,ಗಬ್ಬದ ಹಸುಗಳು,ಮುದಿ ಹಸುಗಳು, ಶತ್ರು ಪಡೆಯ ಕಡೆಗೆ ನುಗ್ಗುತಿತ್ತು.ಶತ್ರು ದೇಶದ ಆನೆಗಳು,ಕುದುರೆಗಳು ಮುಂದೆ ಹೆಜ್ಜೆಯಿಡಲು ಒಲ್ಲೆ ಎನ್ನುತ್ತಿದ್ದವು.ಸೈನಿಕರ ಬಿಲ್ಲು ಗೋವುಗಳ ಕಡೆ ಬಾಣ ಬೀಸಲು ಸಾಧ್ಯವಾಗದೆ ಕೈಗಳಿಂದ ಉರುಳಿತು.ಶತ್ರು ಪಡೆ ತಮಗೆ ತಿಳಿಯದಂತೆ ತಮ್ಮ ರಾಜ್ಯದ ಕಡೆ ಮುಖಮಾಡಿತು.ವೀರಸಿಂಹನಿಗೆ ಬಹಳ ಆನಂದವಾಯಿತು.ಶತ್ರುಗಳನ್ನು ಹಿಮ್ಮೆಟ್ಟಿಸಿದ ಗೋವುಗಳಿಗೆ ರಣರಂಗದಲ್ಲೇ ನಮಸ್ಕರಿಸಿದನು.ಮಾರನೆಯ ದಿನವೇ ಚಾಮುಂಡೇಶ್ವರಿ ದೇವಿಗೆ ಕ್ಷೀರಾಭಿಷೇಕವನ್ನು ಮಾಡಿಸಿ ,ವಿಜಯದಶಮಿಯನ್ನು ಆಚರಿಸಿದನು ಹಾಗೂ ಗೌರಮ್ಮ ಅರಮನೆಯಿಂದ ಮಂಗಳದ್ರವ್ಯ ಮೊದಲಾಗಿ ಕಾಣಿಕೆಯನ್ನು ಕೊಟ್ಟನು.

ಅಭಿಲಾಷ್ ಟಿ ಬಿ
ತಿಪಟೂರು


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ