ಶುಕ್ರವಾರ, ಆಗಸ್ಟ್ 18, 2017

ಕಲಗಚ್ಚಿನ ಬಕೆಟ್ ಮತ್ತು ಅನ್ನಪೂರ್ಣ...

ಸಾಧಾರಣವಾಗಿ ನಾವು ಹಸುಗಳಿಗೆ ಗಂಗೆ,ಗೌರಿ,ಕಾವೇರಿ ಎಂದು ಹೆಸರಿಡುವುದನ್ನು ಕೇಳಿದ್ದೇವೆ.ಆದರೆ ನನ್ನ ಅಜ್ಜನ ಮನೆಯಲ್ಲಿ ಮಾತ್ರ ಒಂದು ವಿಚಿತ್ರ ಕಥೆ .ಅಜ್ಜನ ಮನೆಯಲ್ಲಿ ಒಂದೆರೆಡು ಹಸುಗಳಿದ್ದರೂ ಎಂಟಕ್ಕೂ ಮೀರಿ ಎಮ್ಮೆಗಳಿದ್ದವು.ಆದರೆ ಅಜ್ಜನಿಗೆ ಮಾತ್ರ ಗೋಡಂಬಿ ಆಕಾರದಲ್ಲೇ ದೊಡ್ಡದಾಗಿ ಕೊಂಬನ್ನು ಹೊಂದಿದ್ದ ,ಕೊಟ್ಟಿಗೆಯಲ್ಲಿ ಮೂಲೆ ಗೂಟಕ್ಕೆ ಕಟ್ಟುತ್ತಿದ್ದ ಎಮ್ಮೆಯ ಮೇಲೆ ಮಾತ್ರ ಏನೋ ಬಹಳ ಆಸ್ಥೆ ವಹಿಸುತ್ತಿದ್ದರು.ಆ ಎಮ್ಮೆ ಅಜ್ಜನ ಮನೆಯಲ್ಲೇ ಹುಟ್ಟಿದ್ದಂತೆ ಹಾಗೂ ಇದರ ತಾಯಿ ಇದು ಕರುವಾಗಿದ್ದಾಗಲೇ ಕಿರುಬನ ಬಾಯಿಗೆ ಸಿಕ್ಕಿಬಿದ್ದರಿಂದ ಇದು ತಬ್ಬಲಿ ಮಗು ಎಂದು ಅಜ್ಜ ಅದರ ಮೇಲೆ ಬಹಳ ನಿಗಾವಿಡುತ್ತಾರೆ ಎಂದು ಅಮ್ಮ ಹೇಳುವುದುಂಟು.ಆ ಕರು ಇವತ್ತು ದೊಡ್ಡದಾಗಿ ಅದರ ವಂಶವಾಹಿನಿಗಳು ಅಜ್ಜನ ಮನೆಯನ್ನು ಸಾಕಾರಗೊಳಿಸಿದ್ದರಿಂದ ಅದಕ್ಕೆ ಅನ್ನಪೂರ್ಣ ಎಂದು ಹೆಸರನ್ನೂ ಇಟ್ಟಿದ್ದರು.
ಊರಿನ ಶಿವಣ್ಣನೇ ನಮ್ಮ ಊರಿನ ಎಮ್ಮೆಗಳಿಗೆ ಕೃಷ್ಣನಂತೆ," ಎಮ್ಮೆ,ಎಮ್ಮೆ " ಎಂದು ಊರ ರಸ್ತೆಯಲ್ಲಿ ಕೂಗುತ್ತಾ ಹೊರಟನೆಂದರೆ,ಎಲ್ಲಾ ಎಮ್ಮೆಗಳೂ ಅವನ ಹಿಂದೆಯೇ.ಅಜ್ಜನ ಮನೆಯಲ್ಲಿನ ಎಮ್ಮೆಗಳೂ ಹೋಗುತ್ತಿದ್ದವು.ಆದರೆ ಅನ್ನಪೂರ್ಣ ನನ್ನು ಬಿಟ್ಟು.

ಅನ್ನಪೂರ್ಣಳನ್ನು ಮಾತ್ರ ಅಜ್ಜನೇ ತನ್ನ ಹೊಲಕ್ಕೊ,ತೋಟಕ್ಕೋ ಹೋಗಿ ಮೇಯಿಸಿಕೊಂಡು ಬರುತ್ತಿದ್ದ.ಸಂಜೆ ಆರರ ಸುಮಾರಿಗೆ ಅನ್ನಪೂರ್ಣ ಮತ್ತು ಅಜ್ಜ ಹೊಲದಿಂದ ಬಂತೆಂದರೆ ಅಜ್ಜನಿಗೆ ಕಾಫಿ ,ಅನ್ನಪೂರ್ಣಳಿಗೆ ಕಲಗಚ್ಚಿನ ಬಕೆಟ್ ಹಿತ್ತಲಿನಲ್ಲಿ ಸಿದ್ದವಾಗಿರುತ್ತಿದ್ದವು.

ಅಜ್ಜಿಯ ಕಾಫಿ ಹೇಗೆ ರುಚಿಯಾಗಿರುತ್ತಿತ್ತೋ,ಕಲಗಚ್ಚು ಕೂಡ ಅಷ್ಟೆ ರುಚಿಯಾಗಿರುತ್ತಿತ್ತು ಎಂದು ಎನಿಸುತ್ತಿತ್ತು ,ಅನ್ನಪೂರ್ಣ ಸರಸರನೆ ಕಲಗಚ್ಚು ಕುಡಿಯುವುದು ನೋಡಿದರೆ .ತೊಳೆದ ಅಕ್ಕಿ ನೀರು,ಉದ್ದಿನಬೇಳೆ ನೀರು,ಹುಳಿ ಮಜ್ಜಿಗೆ,ಮಿಕ್ಕಿರೋ ಸಾರು,ತವೆ,ತರಕಾರಿ ಸಿಪ್ಪೆ,ಎಷ್ಟು ಪೌಷ್ಟಿಕಾಂಶಗಳು ನೋಡಿ,ಕಲಗಚ್ಚಿನಲ್ಲಿ.ಇವತ್ತಿನ ಯಾವ ಬೂಸ್ಟ್,ಹಾರ್ಲಿಕ್ಸ್ ಗಳಲ್ಲೂ ಇರುವುದಿಲ್ಲ.ಆದ್ದರಿಂದಲೇ ಅನ್ನಪೂರ್ಣ ಅಷ್ಟು ದಷ್ಟ ಪುಷ್ಟವಾಗಿ ಬೆಳೆದಿದ್ದಳು.ಆದರೆ ಈ ಕಲಗಚ್ಚಿನ ಸೌಭಾಗ್ಯ ಅಜ್ಜನ ಮನೆಯ ಬೆರೆ ಎಮ್ಮೆಗಳಿಗೆ ಇರಲಿಲ್ಲ,ಅವುಗಳಿಗೆ ಊರಿನ ಕೆರೆ ನೀರೆ ಗತಿಯಾಗಿತ್ತು.

ಎಷ್ಟೆಯಾದರೂ ಬ್ರಾಹ್ಮಣರ ಮನೆ,ಹೋಮ,ಹವನ,ಶ್ರಾದ್ಧ,ವೈದಿಕಗಳು ಸರ್ವೆಸಾಮಾನ್ಯ.ಅಂತಹ ದಿನಗಳಲ್ಲಿ ಅನ್ನಪೂರ್ಣಳನ್ನು ಶಿವಣ್ಣನೇ ಹೊಡೆದುಕೊಂಡು ಹೋಗುತ್ತಿದ್ದ.ಸಂಜೆ ಬಂದ ಕೂಡಲೇ ಅಜ್ಜ ಕಲಗಚ್ಚಿನ ಬಕೆಟ್ ನ್ನು ಹಿಡಿದು ಹಿತ್ತಲಿನಲ್ಲಿ ಕಾಯುತ್ತಿದ್ದರು.ಹೀಗೆ ಒಂದು ಬಾರಿ ಅಜ್ಜನ ತಂದೆಯದೋ,ತಾಯಿಯದೋ ವೈದಿಕ,ಸಂಜೆ ನಾಲ್ಕು ಆದರೂ ಕಾರ್ಯಗಳು ಮುಗಿದಿರಲಿಲ್ಲ,ಆಗಲೇ ಅನ್ನಪೂರ್ಣ ಹಿತ್ತಲಿನಲ್ಲಿ ಕಲಗಚ್ಚಿಗಾಗಿ ಅರಚುತ್ತಾ ಕಾಯುತ್ತಿದ್ದಳು.

ಅಜ್ಜ,ಅಜ್ಜಿ ಮಡಿಯಲ್ಲಿದ್ದರಿಂದ ಕಲಗಚ್ಚಿನ ಬಕೆಟ್ ನ್ನು ಮುಟ್ಟುವಂತಿರಲಿಲ್ಲ,ಆದರೆ ಅನ್ನಪೂರ್ಣ ಹಿತ್ತಲಿನ ಬಾಗಿಲಿನಿಂದ ಮನೆಯೊಳಗಡೆ ನುಗ್ಗಿ ಬಂದಳು.ಅಷ್ಟರಲ್ಲೆ ಯಾರೋ ಒಳಗಡೆ ಇದ್ದವರು,ಕಲಗಚ್ಚಿನ ಬಕೆಟ್ ಹಿಡಿದು ಹಿತ್ತಲಿನ ಕಡೆಗೆ ಹೋದರು,ಅನ್ನಪೂರ್ಣಳೂ ಹಿಂದೆ ಓಡಿದಳು.ಅಜ್ಜ ಖುಷಿಯಾದರು.

ಅಜ್ಜ ಕಾರ್ಯವೆಲ್ಲ ಮುಗಿಸಿ ಹಿತ್ತಲಿಗೆ ಹೋದಾಗ ಒಂದು ಅವಘಡವೇ ನಡೆದು ಹೋಗಿತ್ತು.ಅನ್ನಪೂರ್ಣ ಕಲಗಚ್ಚಿನ ಬಕೆಟ್ ನಲ್ಲಿದ್ದ ಅರ್ಧವನ್ನು ಹಾಗೆ ಬಿಟ್ಟು ಕೊರಡಿನಂತೆ ಬಿದ್ದಿದ್ದಳು.ಎಲ್ಲವೂ ಕೈ ಮೀರಿ ಹೋಗಿತ್ತು.ಅಜ್ಜ ಕಂಗಾಲಾದರು.ಅಜ್ಜ ಕಲಗಚ್ಚಿನ ಬಕೆಟ್ ನ್ನು ನೋಡಿದಾಗ ಶ್ರಾದ್ಧಕ್ಕೆಂದು ತಂದಿದ್ದ ಒಂದಿಷ್ಟು ಬಾಳೆ ದಿಂಡುಗಳು ಸಿಕ್ಕವು.ಅಜ್ಜಿ ಬಂದು ಗೋಳಿಟ್ಟರು," ಒಂದು ಅರ್ಧ ಗಂಟೆ ಕಾಯಲಿಲ್ಲವಲ್ಲೆ ಅನ್ನಪೂರ್ಣಿ,,,,,ಒಂದ್ ಸತಿ ಬಕೆಟ್ ನಲ್ಲಿ ಕೈ ಆಡಿಸಿದ್ರೆ ಹೀಗೆ ಆಗ್ತೀರಲಿಲ್ಲ " ಎಂದು.

ಮುಂದೆ ಕಲಗಚ್ಚನ್ನು ಕುಡಿಯುವರೇ ಇಲ್ಲದಂತಾಯಿತು.ಬೇರೆ ಎಮ್ಮೆಗಳಿಗೆ ಕಲಗಚ್ಚು ಕುಡಿದು ಅಭ್ಯಾಸವೇ ಇರಲಿಲ್ಲ.ಕಲಗಚ್ಚಿನ ಬಕೆಟ್ ನ್ನು ಇಡುವುದೇ ನಿಂತಿಹೋಯಿತು.

ಹೀಗೆ ನಮ್ಮ ಸಂಸ್ಕೃತಿಯೂ ಕಲಗಚ್ಚಿನಂತೆ.ಬೇರೆ ಎಮ್ಮೆಗಳೂ ಕಲಗಚ್ಚು ಕುಡಿಯುವುದನ್ನು ಕಲಿತ್ತಿದ್ದರೆ ,ಕಲಗಚ್ಚಿನ ಬಕೆಟ್ ಕೂಡ ಉಳಿಯುತಿತ್ತು.ಹಾಗೆಯೇ ದಿಂಡಿನ ಪದಾರ್ಥಗಳು ನಮ್ಮ ಸಂಸ್ಕೃತಿಯಲ್ಲಿ ಸೇರಿಸಿಕೊಂಡರೆ,ಅದನ್ನು ಕೈಯಾಡಿಸುವಂತ ಅಜ್ಜ ,ಅಜ್ಜಿಯರಂತವರು ಬೇಕು.

ಅಭಿಲಾಷ್ ಟಿ ಬಿ
ತಿಪಟೂರು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ