ಶುಕ್ರವಾರ, ಆಗಸ್ಟ್ 18, 2017

ಕಥೆ: ಸಿಡಿಲಮಾರಿ

ಊರಿಗೆ ಊರೇ  ಗುಳೆಹೋಗುವ ಪರಿಸ್ಥಿತಿ.ಕಳೆದ ನಾಲ್ಕುವರುಷಗಳಿಂದ ಆಕಾಶದಿಂದ ಒಂದು ಬೀಜ ಮೊಳಕೆ ಒಡೆಯುವಷ್ಟೂ ಮಳೆಯ ಹನಿಗಳು ಬಿದ್ದಿಲ್ಲ.ಸೂಳೆಕೆರೆಯ ಕೆರೆ ಒಂದು ಆಟದ ಮೈದಾನವಾದಂತಾಗಿದೆ.ಕೆರೆಯ ಏರಿಯ ಮೇಲಿನ ಸೂಳೆಕೆರೆಯ ಗ್ರಾಮದೇವತೆ " ಸಿಡಿಲಮಾರಮ್ಮ" ನಿಗೆ ಆರತಿ ಬಾನ,ಸಿಡಿ ಎಲ್ಲವದನ್ನೂ ಎರಡು ವರುಷದಿಂದ ನಿಲ್ಲಿಸಿಯೇ ಆಯಿತು.ಮಳೆಯೇ ಹನಿಯುತ್ತಿಲ್ಲ,ಇನ್ನು ಸಿಡಿಲು ಬರುವ ಮಾತೆಲ್ಲಿ ಎಂದೋ,ನಾಲ್ಕು ವರುಷದಿಂದ ಬರದಿಂದ ತತ್ತರಿಸಿದ ಗ್ರಾಮದ ಜನ, ಸಿಡಿಲ ಮಾರಿಯ ಮೇಲಿನ ನಂಬಿಕೆಯನ್ನೆ ಕಳೆದುಕೊಂಡಿದ್ದರು.

ಆದರೆ ಸೂಳೆಕೆರೆಯ ಚೆನ್ನಬಸವಿ ಮಾತ್ರ ಇದಕ್ಕೆ ಹೊರತಾಗಿದ್ದಳು."ಸಿಡಿಲಮಾರಿ ಎಷ್ಟು ದಿನ ಊರು ಬಿಟ್ಟು ಹೋದಾಳು,ಬಂದೇ ಬರುವಳು " ಎನ್ನುವ ನಂಬಿಕೆ.ಪ್ರತಿವರುಷದಂತೆ ವೈಶಾಖದ ಕೊನೆಯ ಸಮಯಕ್ಕೆ ತನ್ನ ಗುಡಿಸಲಿನ  ಸೋಗೆಗಳನ್ನು ಸರಿಪಡಿಸಿದಳು.ಕುರಿಗಳನ್ನು ಕೂಡುತ್ತಿದ್ದ ಗೂಡನ್ನು ಸರಿಪಡಿಸಿದಳು.ಇವಳ ಕಾರ್ಯವನ್ನು ನೋಡಿ ಜನ ನಕ್ಕಿದರು " ಚೆನ್ನಬಸವಿ ಗುಡ್ಲಿಗೆ ಮಾತ್ರ ಮಳೆ ಹುಯ್ಯುತ್ತೆ ಕಣ್ಣ್ರವ್ವಾ " ಎಂದು.

ಎಂದಿನಂತೆ ಚೆನ್ನಬಸವಿ ಇದ್ದ ನಾಲ್ಕು ಕುರಿಗಳನ್ನು ಕೆರೆಯ ಅಂಗಳದಲ್ಲಿ  ಇದ್ದ ಒಣಹುಲ್ಲನ್ನೇಮೇಯಿಸುತ್ತಿದ್ದಳು.ಸಂಜೆ ನಾಲ್ಕರ ಹೊತ್ತಿಗೆನೇ ಎಲ್ಲಿಂದಲೋ ಬರುತ್ತಿದ್ದ ಕಪ್ಪು ಮೋಡಗಳು ಸೂಳೆಕೆರೆಯನ್ನೇ ಆವರಿಸಿತು.ಚೆನ್ನಬಸವಿ ತನ್ನ ಕುರಿಗಳ ಸಮೇತ ಹತ್ತಿರವೇ ಇದ್ದ ಸಿಡಿಲ ಮಾರಿಯ ಗುಡಿಗೇ ಓಡಿದಳು.ಅಂದು ಎಲ್ಲಿಲ್ಲದ ಮಳೆಯ ಆರ್ಭಟ,"ಗುಡಿಸಲನ್ನು ಸರಿಮಾಡಿದ್ದು ಒಳ್ಳೆಯದೇ ಆಯಿತು " ಎಂದು ಹಿಗ್ಗಿದಳು.ಗುಡುಗು ,ಮಿಂಚುಗಳ ನಡುವೆ ಒಂದು ಸಿಂಹನಾದದ ಸಿಡಿಲು ಊರನ್ನೇ ನಲುಗಿಸಿತು.ಸಿಡಿಲಮಾರಿ ಊರಿಗೆ ಬಂದಳು ಎಂದು ಜನ ಖುಷಿಪಟ್ಟರು.ನಾಳೆಯೇ ಹತ್ತು ಕುರಿಯನ್ನು ಬಲಿ ಕೊಡಲೇ ಬೇಕು ಎಂದು ಜನ ಬಾಯಲ್ಲಿ ಓಡಾಡಿತು.ಆದರೆ ಸಿಡಿಲ ಮಾರಿ ಊರಿಗೆ ಬಂದ ಕೂಡಲೇ ನಾಲ್ಕು ಕುರಿ,ಒಬ್ಬ ಮನುಷ್ಯನನ್ನು ಬಲಿತೆಗೆದುಕೊಂಡಾಗಿತ್ತು.ಚೆನ್ನಬಸವಿಯ ಮಾತು ನಿಜವಾಗಿತ್ತು." ಸಿಡಿಲ ಮರಿ ಎಷ್ಟು ದಿನ ಊರು ಬಿಟ್ಟು ಹೋದಾಳು,ಬಂದೇ ಬರುವಳು."

ಅಭಿಲಾಷ್ ಟಿ ಬಿ
ತಿಪಟೂರು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ