ಶುಕ್ರವಾರ, ಆಗಸ್ಟ್ 18, 2017

ಕಥೆಯಲ್ಲ ,ಇದೇ " ಅರ್ಧನಾರೀಶ್ವರ " ಜೀವನ..... .

ಜಗಳವೋ ಜಗಳ,ಇವರ ಜಗಳಕ್ಕೆ ದೇವಲೋಕ,ವೈಕುಂಠ,ಭೂಲೋಕ,ಎಲ್ಲಾ ಲೋಕಗಳೂ ಅಲ್ಲಾಡಿ ಹೋಗಿತ್ತು.ಯಾರು ಎಷ್ಟು ಹೇಳಿದರೂ ಇಬ್ಬರೂ ಒಪ್ಪುವ ಹಾಗಿಲ್ಲ,ಒಟ್ಟಿನಲ್ಲಿ ಇಬ್ಬರಿಗೂ ಆಸ್ತಿ ಪಾಲಾಗಬೇಕು ಅಷ್ಟೆ.ಪಾರ್ವತಮ್ಮ ಅಂತು ದಿನ ಅತ್ತಿದ್ದೆ ,ಅತ್ತಿದ್ದು,ಪರಮೇಶ್ವರಪ್ಪನಂತು  ಸುತರಂ ಒಪ್ಪಲೇ ಇಲ್ಲ,ಅವನದು ಒಂದೇ ಮಾತು " ಆಸ್ತಿನ ಪಾಲು ಮಾಡಲ್ಲ " ಅಂತ.ಆದ್ರೂ ಗಣೇಶ ಸುಬ್ರಮಣ್ಯ ಮಾತ್ರ ಹೆಂಡತಿರಾ ಮಾತು ಕಟ್ಕಂಡು ದಿನಾ ಅಪ್ಪ ಅಮ್ಮನ ಜೊತೆ ಜಗಳ.ಒಟ್ಟಿನಲ್ಲಿ ಕೈಲಾಸ ಅಲ್ಲೋಲ ಕಲ್ಲೋಲವಾಗಿತ್ತು.

ಕೈಲಾಸದ ಜಗಳ ತನ್ನ ಮಿತಿಯನ್ನೂ ಮೀರಿದಾಗ ಪರಮೇಶ್ವರಪ್ಪ ತನ್ನ ಇಬ್ಬರು ಮಕ್ಕಳಿಗೂ ಸಮಾನವಾಗಿ ಆಸ್ತಿಯನ್ನು ಹಂಚಲು ನಿರ್ಧರಿಸಿದನು.ಅದಕ್ಕಾಗಿ ವೈಕುಂಠದಿಂದ ನಾರಾಯಣ,ಸತ್ಯಲೋಕದಿಂದ ಬ್ರಹ್ಮ,ಮಥುರಾದಿಂದ ಕೃಷ್ಣ,ಕಾಶಿಯಿಂದ ಕಾಲಭೈರವ,ಅಯೋಧ್ಯೆಯಿಂದ ಭರತ,ರಾಮ,ಲಕ್ಷ್ಮಣ ,ಗದಗದಿಂದ ವೀರನಾರಾಯಣ ಎಲ್ರೂ ಕೈಲಾಸಕ್ಕೆ ಬಂದು ಸೇರಿದರು.ಆಸ್ತಿ ಹಂಚಿಕೆ ಆರಂಭವಾದೊಡೆ ನಾರದ ಎಲ್ಲವನ್ನೂ ಸಮಾನವಾಗಿ ಹಂಚಲು ಆರಂಭಿಸಿದ. " ನೋಡಪ್ಪ ಗಣಪತಿ,ನಿನಗೆ ಇಡುಗಂಜಿ,ಆನೆಗುಡ್ಡೆ,ಬೆಳವಾಡಿ ಎಲ್ಲಾ ನಿನಗೆ ಸೇರುತ್ತೆ.ಹಾಗೆ ನಿನ್ನ ವಾಹನವಾದ ಮೂಷಿಕ ರೈಲ್ವೆ ಸ್ಟೇಷನ್,ಬಸ್ ಸ್ಟಾಂಡ್,ಹೋಟೆಲ್,ರಾಗಿ ಹೊಲ ಎಲ್ಲಾ ಕಡೆ ಇರುವುದರಿಂದ ಇವೆಲ್ಲವೂ ನಿನಗೇ ಸೇರತಕ್ಕದು.
ಹಾಗೆಯೇ ಮುಂದುವರೆದು ," ಸುಬ್ರಮಣ್ಯ ,ನಿನಗೆ ಪಳನಿ,ತರೀಕೆರೆ,ಘಾಟಿ,ಕುಕ್ಕೆ ಸಂಸ್ಥಾನಗಳು ನಿನಗೆ ..ಹಾಗೆ ತಮಿಳುನಾಡು,ಪಶ್ಚಿಮ ಘಟ್ಟದ ಕಾಡುಗಳು ಎಲ್ಲವೂ ನಿನಗೆ ಸೇರತಕ್ಕದು " ಎಂದು ಹೇಳಿದರು.

ನಾರದ ಆಸ್ತಿ ಹಂಚಿಕೆ ನೆರೆದಿದ್ದವರಿಗೆಲ್ಲ ಒಪ್ಪಿಗೆಯಾಗಿ ,ಗಣೇಶ ಸುಬ್ರಮಣ್ಯರಿಗೂ ಒಪ್ಪಿಗೆಯಾಯಿತು.ಕೊನೆಗೆ ಉಳಿದಿದ್ದರೆಂದರೆ " ಪಾರ್ವತಮ್ಮ,ಪರಮೇಶ್ವರಪ್ಪ" ?.ಮರೆತೇ ಹೋದನಲ್ಲ ಎಂದು ನಾರದರು ಯೋಚಿಸುತ್ತಿರುವಾಗಲೇ " ನಾನು ನಮ್ಮಮ್ಮನ ಕರೆದುಕೊಂಡು ಹೋಗ್ತೀನಿ " ಅಂತ ಗಣೇಶ," ನಾನು ನಮ್ಮಪ್ಪನ ಕರ್ಕಂಡು ಹೋಗ್ತೀನಿ " ಅಂತ ಸುಬ್ರಮಣ್ಯ ಹೇಳಿಯೇ ಬಿಟ್ಟರು.

ಅಂದೇ ತಮ್ಮ ಸಾಮಾನುಗಳನ್ನು ಗಣೇಶ,ಸುಬ್ರಮಣ್ಯ ಗಾಡಿಗೆ ಹೇರಿಕೊಳ್ಳುತ್ತಾರೆ.ನೆರೆದಿದ್ದ ದೇವಾನುದೇವತೆಗಳ ಆಶಿರ್ವಾದ ಪಡೆಯುತ್ತಾರೆ.ತಮ್ಮ ತಂದೆ ತಾಯಿಯರನ್ನು ಕರೆಯಲು ಹೋದಾಗ ಅವರಿಗೆ ಆಶ್ಚರ್ಯವೇ ಕಾದಿರುತ್ತದೆ .ಪರಮೇಶ್ವರನು ಅರ್ಧನಾರೀಶ್ವರನ ರೂಪದಲ್ಲಿ ಇರುತ್ತಾನೆ.ಗಣೇಶ ಸುಬ್ರಮಣ್ಯ ಇಬ್ಬರಿಗೂ ತಮ್ಮ ತಪ್ಪಿನ ಅರಿವಾಗಿ ತಂದೆ ತಾಯಿಯ ಬಳಿ ಕ್ಷಮೆಕೇಳುತ್ತಾರೆ.

ಆತ್ಮೀಯ ಓದುಗರೇ,ನಮ್ಮ ತಂದೆ ತಾಯಿಯರು ಕೂಡ ಪಾರ್ವತಿ ಪರಮೇಶ್ವರ ಸ್ವರೂಪವೇ.ದೇಹ ಬೇರೆಯಾದರೂ ಜೀವ ಒಂದೇ.ನನ್ನ ಸಂಸ್ಕೃತಿ,ಭಾರತೀಯತೆ.ನಾನು ನನ್ನ ತಂದೆ ತಾಯಿಯರನ್ನು ವಸ್ತುಗಳಂತೆ ಕಾಣದೆ,ದೇವತಾ ಸ್ವರೂಪವೆಂದು ಭಾವಿಸಿ ,ಅವರನ್ನು ನನ್ನ ಮಕ್ಕಳಿಗಿಂತಲೂ ಚೆನ್ನಾಗಿ ಕಾಪಾಡಿಕೊಳ್ಳುತ್ತೇನೆ ಎಂದು ಪಣತೊಡಿ.ವೃದ್ದಾಶ್ರಮದಲ್ಲಿ ಏನಾದರೂ ನಿಮ್ಮ ರತ್ನಗಳನ್ನು ಬಿಟ್ಟಿದ್ದರೆ ಇಂದೇ ಕರೆತನ್ನಿ.ಹಾಗೆಯೇ ತಂದೆ ತಾಯಿಯರಿಗಿಂತ ಬೇರೆ ಆಸ್ತಿ ಯಾವುದೂ ಇಲ್ಲ,ನಿಮ್ಮನ್ನು ಸಾಕಿ ಸಲುಹಿದ ನಿಮ್ಮ ಪೋಷಕರನ್ನು ನಿಮ್ಮ ಮಟ್ಟಿಗೆಯಾದರೂ ಪೋಷಿಸಿ.ತಂದೆ ತಾಯಿಯರಿಗೆ ಬೆಲೆ ಕಟ್ಟಬೇಡಿ

ಮುಗಿದಿಲ್ಲ,ಈಗಷ್ಟೇ ಆರಂಭವಾಗಿದೆ......

ಅಭಿಲಾಷ್ ಟಿ ಬಿ
ತಿಪಟೂರು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ