ಶುಕ್ರವಾರ, ಆಗಸ್ಟ್ 18, 2017

ವರ್ಷಧಾರೆ....

ಊರಿನಲ್ಲಿ ಮಳೆಯಾಗಿ ಸುಮಾರು ವರುಷಗಳೇ ಆಗಿವೆ.ಕೆರೆ ತುಂಬಿದ್ದು ನೋಡಿದ್ದು ಸತ್ಯ ಮಾವನ ಕೊನೆ ತಂಗಿ ಮದ್ವೆಲೆ.ಆವಾಗ್ಲೇ ಕೆರೆ ತುಂಬಿದ್ದು ,ಭತ್ತ ಬೆಳೆದಿದ್ದು     ಎಲ್ಲ .ಈಗಾಗಲೇ ಸತ್ಯ ಮಾವನ ಮಗ ಶ್ರೀಕರ ಮತ್ತು ಅವರ ಕೊನೆ ತಂಗಿ ಮಗಳು ವರ್ಷನು ಮದ್ವೆಗೆ ಬಂದು ನಿಂತಿದ್ದಾರೆ.ಇನ್ನು ಯೋಚನೆ ಮಾಡಿ ,ನಮ್ಮ ಊರಿಗೆ ಮಳೆ ಬಂದು ಎಷ್ಟು ವರುಷವಾಯಿತೆಂದು.

ಊರಿಗೆ ಮಳೆಯಾಗಲೆಂದು ಊರಿನ ಗ್ರಾಮಸ್ಥರೆಲ್ಲ ಸೇರಿ ಗ್ರಾಮದೇವತೆಯಾದ ಕೆಂಪಮ್ಮನ ದೇವಸ್ಥಾನದಲ್ಲಿ ಚಂಡಿಯಾಗವನ್ನು ನೆರೆವೇರಿಸಲು  ತೀರ್ಮಾನಿಸಿದ್ದರು.ಆದ್ದರಿಂದ ಶ್ರೀಕರ ಮಾತು ವರ್ಷ ಗುರವಾರದ ರಾತ್ರಿ ಪಾಳಯದ ಕೆಲಸವನ್ನು ಮುಗಿಸಿಶುಕ್ರವಾರದ ಬೆಳಿಗ್ಗೆ ಬೆಂಗಳೂರಿನಿಂದ ತಿಪಟೂರಿನವರೆಗೆ ರೈಲಲ್ಲಿ ಜೊತೆಯಲ್ಲೇ ಬಂದು ಅಲ್ಲಿಂದ ನೇರವಾಗಿ ಕಲ್ಲೂರಿಗೆ ಬಂದು ಇಳಿದಿದ್ದರು.ಸತ್ಯ ಮಾವನೂ ಸೇರಿ ಎಲ್ಲರೂ ಆಗಲೇ ದೇವಸ್ಥಾನದ ಹೋಮದ ಕೈಂಕರ್ಯಗಳಲ್ಲಿ ಭಾಗಿಯಾಗಿದ್ದರು.ಇಬ್ಬರೂ ಹೆಚ್ಚು ಸಮಯ ವ್ಯರ್ಥಮಾಡದೆ ಮಡಿಯುಟ್ಟು ದೇವಸ್ಥಾನದ ಕಡೆಗೆ ನಡೆದರು.ಶ್ರೀಕರ ಮಗುಟವನ್ನು ಉಟ್ಟಿದ್ದರೆ ,ವರ್ಷ ಸಾದಾ ಚೂಡಿದಾರ್ ತೊಟ್ಟಿದ್ದಳು.

ಪೂರ್ಣಾಹುತಿ ,ಊರ ಊಟ ಎಲ್ಲವೂ ಮುಗಿಯುವ ಹೊತ್ತಿಗೆ ಸಂಜೆ ನಾಲ್ಕು ಆಗಿತ್ತು.ಅದು ಸಂಜೆ ನಾಲ್ಕರಂತೆ ಕಾಣಲೇ ಇಲ್ಲ,ಆರು ಗಂಟೆಯ ಮೇಲೆಯೇ ಆಗಿದಂತಿತ್ತು.ಎಂದೂ ಕಾಣದ ಅಷ್ಟು ದಟ್ಟ ಮೋಡಗಳು ಕಲ್ಲೂರನ್ನು  ಆಕ್ರಮಿಸಿಕೊಂಡಿದ್ದವು.ಹಕ್ಕಿಗಳು ಆಗಲೇ ಗೂಡ ಸೇರಲು ಹೊರಟ್ಟಿದ್ದವು.ಗಾಳಿಯ ಜೊತೆಗೆ ಮರಗಳ ಹರಟೆಯ ಬಿಟ್ಟರೆ ಇಡೀ ಊರೇ ನಿಶ್ಯಬ್ದವಾಗಿತು.ಶ್ರೀಕರ ತನ್ನ ಪ್ರೀತಿಯ ಉಯ್ಯಾಲೆಮಣೆಯನ್ನು ತೂಗಿಕೊಳ್ಳುತಿದ್ದಾನೆ.ಸತ್ಯ ಮಾವ ಹಿತ್ತಲಿನಲ್ಲಿ ದನಗಳಿಗೆ ಕಾಯುತ್ತಿದ್ದಾರೆ.ವರ್ಷ ತನ್ನ ಪ್ರೀತಿಯ ಗಾಳಿಪಟವನ್ನು ಹಿಡಿದು ಶ್ರೀಕರನ ಮುಂದೆ ಹಾಜರಾದಳು.ಅವನಿಗೆ ದಾರಿಯೇ ಇರಲಿಲ್ಲ,ಸುಮ್ಮನೆ ಎದ್ದು ಹೊರಟ.ಇಬ್ಬರೂ ಮನೆಯ ಸೂರನ್ನು ದಾಟಿ ಹೊಲದ ಬಾರೆಯ ಕಡೆಗೆ ಹೊರಟರು.

ವರ್ಷ ವೃತ್ತಿಯಲ್ಲಿ ಸಾಪ್ಟ್ ವೇರ ಇಂಜಿನಿಯರ್,ದೇಶ ವಿದೇಶಗಳಿಗೆ ಮೋಡದ ಮೇಲೆ ಹಾರಿದ್ದರೂ ತನ್ನ ಹಳೆಯ ಚಾಳಿಯನ್ನು ಬಿಟ್ಟಿರಲಿಲ್ಲ.ಬೆಂಗಳೂರಿನಲ್ಲಿ ಇದ್ದರೂ ಅಷ್ಟೆ ,ತನ್ನ ಬೇಡಿಕೆಯನ್ನು ಗಾಳಿಪಟಕ್ಕೆ ನಿವೇದಿಸಿ ದೇವರಿಗೆ ತಲುಪಿಸು ಎಂದು ಆಕಾಶಕ್ಕೆ ಹಾರಿಬಿಡುವಳು.ಒಟ್ಟಿನಲ್ಲಿ ಹೇಳಬಹುದಾದರೆ ಅವಳು ಮುಗ್ದ ಬಾಲೆಯಷ್ಟೆ.

ಇಬ್ಬರೂ ಮಳೆಬಾರದೆ ಒಣಗಿ ಹೋಗಿದ್ದ ಹೆಸರುಗಿಡಗಳ ಮೇಲೆ ನಡೆದು ಹೋಗುತ್ತಿದ್ದರು.ಶ್ರಾವಣದ ನಾಗರಪಂಚಮಿಗೆ ಹಲವು ದಿನವೇನು ಉಳಿದಿರಲಿಲ್ಲ.ಅವರು ಹೊರಟಾಗಲೇ ಒಂದೆರೆಡು ಹನಿಗಳು ಆಕಾಶದಿಂದ ಉದುರಿತ್ತಿದ್ದವು.ಹೊಲದ ಬಾರೆ ಮೇಲೆ ನಿಂತು ಇಬ್ಬರೂ ಒಂದೊಂದು ಪಟವನ್ನು ಹಾರಿಸುತ್ತಾ ನಿಂತರು.ವರ್ಷಾಳ ಪಟ ಮೋಡ ವನೂ ಮುಟ್ಟಿತ್ತು.ಹಾರುತ್ತಾ ಹಾರುತ್ತಾ ಅದು ಕೈಯಿಂದ ಕಳಚಿ ಹೋಗಿತು.ಅವಳ ಅದನ್ನು ಹಾಗೆಯೇ ಬಿಟ್ಟು ಶ್ರೀಕರ ಕೈಯಲ್ಲಿದ ಪಟವನ್ನು ಹಾರಿಸಲು ಮುಂದಾದಳು.ಆಗಾಗ್ಗೆ ಹನಿಯುತ್ತಿದ್ದ ಮಳೆ,ಈಗ ಜಿಟಿ ಜಿಟಿ ಮಳೆ ಶುರುವಾಯಿತು.ಶ್ರೀಕರ ವರ್ಷ ಇಬ್ಬರೂ ಸೇರಿ ಪಟವನ್ನು ಹಾರಿಸುತ್ತಾ ನಿಂತರು.ಆಕಾಶವು ಮತ್ತೆ ಕಪ್ಪಿಟ್ಟವು.ಮಧ್ಯೆ ಮಧ್ಯೆ ಒಂದೆರೆಡು ಮಿಂಚುಗಳ ನಡುವೆ ಅಬ್ಬರಿಸಿದ ಸಿಡಿಲಿಗೆ ವರ್ಷ ಬೆಚ್ಚಿಬಿದ್ದು ಶ್ರೀಕರನ ಎದ್ದೆಯನ್ನಪ್ಪಿ ನಿಂತಳು.ಶ್ರೀಕರ ಗಾಳಿಪಟವನ್ನು ಆಕಾಶದಲ್ಲಿ ತೇಯಲು ಬಿಟ್ಟು ವರ್ಷಳನು ತಬ್ಬಿಹಿಡಿದನು.ಮುಂಗಾರಿನ ಮಳೆಯಲ್ಲಿ ಇಬ್ಬರೂ ನೆನೆದು ತೊಯ್ದರು.ಮೆಲ್ಲಗೆ ಅವಳ ಮುಂಗುರಳ ಸರಿಸಿ ಕಿವಿಯಲ್ಲಿ " ಮದ್ವೆ ಆಗೋಣೆನೆ " ಎಂದು ನುಡಿದನು.ವರ್ಷ ಒಡನೆಯೇ ಅವನಿಂದ ದೂರ ಸರಿದು " ಹೋಗೋ ,ನಿನ್ ಬಾಯಿ ವಾಸನೆ " ಎಂದು ನಾಚಿಕೆಯಿಂದ ಹೇಳಿ ಊರಕಡೆ ಓಡಿದಳು.ಮುಂದಿನ ವರ್ಷಧಾರೆಯ ಹೊತ್ತಿಗೆ ಇಬ್ಬರಿಗೂ ಜೀರಿಗೆಧಾರೆಯೂ ಮುಗಿದಿತ್ತು.


ಅಭಿಲಾಷ್ ಟಿ ಬಿ
ತಿಪಟೂರು


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ