ಭಾನುವಾರ, ಏಪ್ರಿಲ್ 9, 2017

ಬುದ್ದಿವಂತ ಮಂತ್ರಿ

ಕಥೆ: ಬುದ್ದಿವಂತ ಮಂತ್ರಿ

ಒಂದಾನೊಂದು ಕಾಲದಲ್ಲಿ ಕೃತ್ತಿಕಾಪುರವೆಂಬ ಪುಟ್ಟ ರಾಜ್ಯವಿತ್ತು.ಅದನ್ನು ಮಹಾರಾಜ ಸುಮಂತನು ಆಳುತ್ತಿದ್ದನು.ಆ ರಾಜ್ಯವು ಬಹಳ ಸುಭಿಕ್ಷವಾಗಿದ್ದರಿಂದ ಪ್ರಜೆಗಳೆಲ್ಲರೂ ಕ್ಷೇಮವಾಗಿದ್ದರು ,ಪ್ರಜೆಗಳೆಲ್ಲರೂ
ಕ್ಷೇಮವಾಗಿದ್ದರಿಂದ ರಾಜನು ಆನಂದದಿಂದ ಇದ್ದನು.
ಹೀಗೆ ಒಂದು ದಿನ ಮಹಾರಾಜ ಮತ್ತು ಮಹಾರಾಣಿ ಅರಮನೆಯ ಉದ್ಯಾನವನದಲ್ಲಿ ವಿಹರಿಸುತ್ತಿದ್ದಾಗ ರಾಜ್ಯದ ಮಂತ್ರಿಗಳಾದ ವಿದ್ಯಾನನರು ಅಲ್ಲಿಗೆ ಬರುತ್ತಾರೆ.ಉಭಯ ಕುಶಲೋಪರಿ ನಡೆದ ಮೇಲೆ ಮಹಾರಾಜನಿಗೆ ತನ್ನ ಮಂತ್ರಿಯ ಬುದ್ದಿವಂತಿಕೆಯನ್ನು ಪರೀಕ್ಷಿಸಬೇಕೆಂದು ಆಸೆ ಹುಟ್ಟಿ ,ತನ್ನ ಮಂತ್ರಿಯನ್ನು ಅಲ್ಲೇ ನಿಲ್ಲಲು ಹೇಳುತ್ತಾನೆ.
ಮಹಾರಾಜನು ಮಂತ್ರಿಯನ್ನು ಪರೀಕ್ಷಿಸುವ ಸಲುವಾಗಿ ಒಂದು ಉಪಾಯ ಮಾಡಿ,ತನ್ನ ಮಗನಾದ ರಾಜಕುಮಾರ ಕಾರ್ತಿಕಕುಮಾರನನ್ನು,ಅರಮನೆಯ ಬಾಣಸಿಗನನ್ನು ಮತ್ತು ಕಾವಲು ಭಟನನ್ನು ಕರೆಸಿಕೊಳ್ಳುತ್ತಾನೆ.ಮಹಾರಾಜನು ಮೂವರಿಗೂ ಒಂದೊಂದು ಬೊಂಬೆಗಳನ್ನು ನಿಮಗೆ ಇಷ್ಟವಾಗುವ ರೀತಿಯಲ್ಲಿ ಸಿಂಗರಿಸಿ ಸೇವಕರ ಕೈಯಲ್ಲಿ ಕಳುಹಿಸಿಕೊಡಬೇಕು ಎಂದು ಹೇಳಿಕಳುಹಿಸುತ್ತಾನೆ.
ಸ್ವಲ್ಪ ಸಮಯದ ನಂತರ ಸೇವಕನೊಬ್ಬನು ಮೂರು ವಿವಿಧ ರೀತಿಯಲ್ಲಿ ಅಲಂಕೃತಗೊಂಡಿದ್ದ ಬೊಂಬೆಗಳನ್ನು ತಂದು ಕೊಟ್ಟನು.ಒಂದು ಬೊಂಬೆ ಅರಮನೆಯ ಬಾಣಸಿಗನಂತೆ,ಮತ್ತೊಂದು ಕಾವಲು ಭಟರಂತೆ,ಮತ್ತೊಂದು ರಾಜಕುಮಾರನಂತೆ ಅಲಂಕೃತಗೊಂಡಿತ್ತು.ಮಹಾರಾಜ ಮಂತ್ರಿಯನ್ನು ಕರೆದು "ಮಂತ್ರಿ ವಿದ್ಯಾನನ,ನಿನ್ನ ಮುಂದೆ ಇರುವ ಈ ಮೂರು ಬೊಂಬೆಗಳನ್ನು ಯಾರು ಯಾರು ಅಲಂಕೃತಗೊಳಿಸಿದ್ದಾರೆ ಎಂದು ಸರಿಯಾಗಿ ಗುರುತಿಸಿದರೆ ,ಬಿಳಿ ಕುದುರೆಯನ್ನು ಉಡುಗೊರೆಯಾಗಿ ನೀಡುವೆ " ಎಂದು ಹೇಳಿದನು.
ಮಂತ್ರಿಯು ಮೂರು ಬೊಂಬೆಗಳನ್ನು ಸರಿಯಾಗಿ ಪರೀಕ್ಷಿಸಿ ತನ್ನ ಉತ್ತರವನ್ನು ಹೇಳುತ್ತಾನೆ.
"ಮಹಾರಾಜ,ಬಾಣಸಿಗನಂತೆ ಅಲಂಕಾರಗೊಂಡಿರುವ ಬೊಂಬೆಯನ್ನು ನಿನ್ನ ಮಗನಾದ ಕಾರ್ತಿಕಕುಮಾರನು,ರಾಜಕುಮಾರನಂತೆ ಕಾವಲು ಭಟನೂ ಹಾಗೂ ಕಾವಲು ಭಟನಂತೆ ಬಾಣಸಿಗ ಅಲಂಕಾರ ಮಾಡಿರುವರು " ಎಂದು ಉತ್ತರವಿಟ್ಟನು.
ಮಹಾರಾಜ ಮಂತ್ರಿಯ ಉತ್ತರವನ್ನು ಪರೀಕ್ಷಿಸಲು ಬಾಣಸಿಗ,ಕಾವಲು ಭಟ ಮತ್ತು ತನ್ನ ಮಗನನ್ನು ತಾವು ಅಲಂಕರಿಸಿದ್ದ ಬೊಂಬೆಗಳು ಯಾವುದೆಂದು ಕೇಳಲು ,ಅವರ ಉತ್ತರವೂ ,ಮಂತ್ರಿ ವಿದ್ಯಾನನರ ಉತ್ತರವೂ ಒಂದೇ ಆಗಿತ್ತು.
ಮಹಾರಾಜನಿಗೆ ಆಶ್ಚರ್ಯಕ್ಕಿಂತ ಮಂತ್ರಿಯೂ ತಾನು ಉತ್ತರವನ್ನು ಹೇಗೆ ಯೋಚಿಸಿರುವನು ಎಂಬ ಕುತೂಹಲ ಹೆಚ್ಚಾಗಿ ಮಂತ್ರಿಯನ್ನು ಕುರಿತು
" ಮಂತ್ರಿ ,ನಾನು ನನ್ನ ಮಗ ಬೊಂಬೆಗೆ ರಾಜಕುಮಾರನಂತೆ ಅಲಂಕಾರ ಮಾಡುತ್ತಾನೆಂದು ಭಾವಿಸಿದ್ದೆ " ಎಂದು ಕೇಳಲೂ
ಮಂತ್ರಿಯೂ ಪ್ರತಿಯಾಗಿ " ಮಹಾರಾಜ ,ತನಗೆ ಲಭ್ಯವಿಲ್ಲದ ವಸ್ತುವನ್ನೇ ಅಪೇಕ್ಷಿಸುವುದೇ ಮಾನವನ ಗುಣ.ಉದಾಹರಣೆಗೆ ,ನಿಮ್ಮ ಮಗನಿಗೆ ಈಡಿ ರಾಜ್ಯದ ಮೇಲೆಯೇ ಅಧಿಕಾರವಿದೆ,ಅವನು ಮುಂದೆ ಈ ರಾಜ್ಯದ ಮಹಾರಾಜನೂ ಆಗೇ ಆಗುತ್ತಾನೆ.ಆದರೆ ಅವರು ಹೋಗಿ ಅಡಿಗೆಮನೆಯಲ್ಲಿ ತನಗೆ ಇಷ್ಟವಾದ ಖಾದ್ಯವನ್ನು ಮಾಡಲು ಸಾಧ್ಯವಾಗುತ್ತದೆಯೆ? ಅದು ಸಾಧ್ಯವಾದರೂ ಜನರ ಮಾತು ಕೇಳಬಹುದಾದಿತು.ಆದ್ದರಿಂದ ಅವರು ಬಾಣಸಿಗನಂತೆ ಬೊಂಬೆಯನ್ನು ಶೃಂಗಾರ ಮಾಡಿ ತಮ್ಮ ಆಸೆಯನ್ನು ತೀರಿಸಿಕೊಂಡಿದ್ದಾರೆ.ಹಾಗೆ ಕಾವಲು ಭಟನು ತಾನೂ ರಾಜ್ಯದ ದೊರೆಯಾಗಬೇಕೆಂಬ ಆಸೆಯಿಂದ ಬೊಂಬೆಗೆ ರಾಜಕುಮಾರನಂತೆ ಅಲಂಕಾರ ಮಾಡಿದನೊ ಅಥವಾ ರಾಜ್ಯಕ್ಕೆ ಆಪತ್ತು ಬಂದು ಒದಗಿದರೆ,ರಾಜಕುಮಾರನಂತೆ ಹೋರಾಡಬೇಕೆಂದೋ ಬೊಂಬೆಗೆ ರಾಜಕುಮಾರನಂತೆ ಅಲಂಕಾರ ಮಾಡಿರುವನು.ಹಾಗೆಯೇ,ಬಾಣಸಿಗನು ತನ್ನ ಒಡೆಯನಿಗೆ ಬರೀ ಕಾವಲಿಯಲ್ಲಿ ಒಬ್ಬಟ್ಟು ಬೇಯಿಸಿದಷ್ಟೆ ಆಗದೆ,ಕತ್ತಿಯನ್ನು ಹಿಡಿದು ಶೌರ್ಯವನ್ನೂ ಪ್ರದರ್ಶಿಸಬೇಕೆಂಬ ಆಸೆಯಿಂದ ಹೀಗೆ ಕಾವಲು ಭಟನಂತೆ ಬೊಂಬೆಗೆ ಅಲಂಕಾರ ಮಾಡಿರುವನು " ಎಂದು ಹೇಳಿದನು.
ಮಹಾರಾಜನು ಮಂತ್ರಿಯ ಆಲೋಚನೆಯ ಶಕ್ತಿ ಮತ್ತು ಮಂತ್ರಿಯು ಕೊಟ್ಟ ಉತ್ತರವನ್ನು ಮೆಚ್ಚಿ ಮಂತ್ರಿಯನ್ನು ಮನಸಾರ ಹೊಗಳಿ ಬಿಳಿಕುದುರೆಯನ್ನು ಬಹುಮಾನವಾಗಿ ಕೊಟ್ಟನು.
ಅಭಿಲಾಷ್ ಟಿ ಬಿ
ತಿಪಟೂರು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ