ಮಂಗಳವಾರ, ಏಪ್ರಿಲ್ 11, 2017

ಕಥೆ: ಗಂಗಾಧರನು ಚಂದ್ರಶೇಖರನಾದುದು ...

ಕಥೆ: ಗಂಗಾಧರನು ಚಂದ್ರಶೇಖರನಾದುದು ...

ಒಂದು ಬಾರಿ ಪಾರ್ವತಿ ಮತ್ತು ಪರಮೇಶ್ವರರು ನಂದಿಯ ಮೇಲೆ ಕುಳಿತು ಭೂಲೋಕದಲ್ಲಿ ಸಂಚಾರ ಮಾಡುತ್ತಿದ್ದರು.ಪರಮೇಶ್ವರನು ತನ್ನ ಮಡದಿಗೆ ಭೂಲೋಕದ ಪರ್ವತ,ನದಿ,ಹಕ್ಕಿಗಳನ್ನು ತನ್ನ ಮಡದಿಗೆ ತೋರಿಸುತ್ತಾ ನಡೆಯುತ್ತಿದ್ದನು.ಆಕಸ್ಮಿಕವಾಗಿ ಪಾರ್ವತಿದೇವಿಗೆ ಸುಗಂಧಭರಿತವಾದ,ಚಂದ್ರನಷ್ಟೆ ಹೊಳಪುಳ್ಳ ಹೂವೊಂದು ಕಣ್ಣಿಗೆ ಬಿದ್ದಿತು.ಆ ಹೂವಿನ ಬಗ್ಗೆ ಪಾರ್ವತಿದೇವಿಯು ಭೂದೇವಿಯನ್ನು ಕೇಳಲು,"ಅದನ್ನು ಸೂಜಿ ಮಲ್ಲಿಗೆಯೆಂದು ಕರೆಯುತ್ತಾರೆ.ಮುತ್ತೈದೆ ನೀನು ,ಅಪರೂಪಕ್ಕೆ ಭೂಲೋಕಕ್ಕೆ ಬಂದಿರುವೆ ," ಎಂದು ಹೇಳಿ ಭೂದೇವಿಯು ಪಾರ್ವತಿ ದೇವಿಗೆ ಮಲ್ಲಿಗೆ ಹೂವನ್ನು ದಂಡೆಯಾಗಿ ಕಟ್ಟಿ,ಅರಿಶಿನ ಕುಂಕುಮ,ಸೀರೆ ಎಲ್ಲವನ್ನೂ ಕೊಟ್ಟಳು.ಪಾರ್ವತಿ ದೇವಿಯೂ ಬಹಳ ಸಂತಸಪಟ್ಟಳು.
ಹೆಣ್ಣಿಗೆ ಎಷ್ಟಾದರೂ ಆಸೆ ಹೆಚ್ಚು ಎನ್ನುವ ಹಾಗೆ,ಪಾರ್ವತಿ ದೇವಿಗೆ ಮಲ್ಲಿಗೆ ಹೂವಿನ ಮೇಲೆ ಆಸೆ ಹೆಚ್ಚಾಗಿ ಪರಮೇಶ್ವರನನ್ನು ಕುರಿತು "ನಾವು ಈ ಗಿಡವನ್ನು ಕೈಲಾಸಕ್ಕೆ ತೆಗೆದುಕೊಂಡು ಹೋದರೆ ,ಪ್ರತಿನಿತ್ಯವೂ ಈ ಪುಷ್ಪವನ್ನು ನಾನು ಮುಡಿಯಬಹುದು " ಎಂದು ಕೇಳಲು ,ಪ್ರತ್ಯುತ್ತರವಾಗಿ ಪರಮೇಶ್ವರನು " ಭೂಲೋಕದಲ್ಲಿ ಇರುವ ವಾತಾವರಣವು ಕೈಲಾಸದಲ್ಲಿ ಇಲ್ಲವೆಂದು ,ನಾವು ಬಲವಂತವಾಗಿ ತೆಗೆದುಕೊಂಡು ಹೋದರೂ,ಅದು ಬತ್ತಿ ಹೋದರೆ ಭೂದೇವಿ ಮುನಿಯುವಳು " ಎಂದು ಹೇಳಿದನು.
ತುಸು ಕಾಲದ ನಂತರ ಪರಮೇಶ್ವರನು " ಹೇಗಾದರೂ ಮಾಡಿ ,ಪಾರ್ವತಿ ದೇವಿಗೆ ಈ ಕುಸುಮವು ದಿನನಿತ್ಯ ದೊರಕಬೇಕು " ಎಂದು ನಿರ್ಧಾರಮಾಡಿ ,ತನ್ನ ಶಿರದಲ್ಲಿದ್ದ ಗಂಗೆಯನ್ನು ಮಲ್ಲಿಗೆ ಬಳ್ಳಿಯ ಬೇರುಗಳಿಗೆ ಹರಿಸಿದನು.ಪವಿತ್ರ ಗಂಗೆಯು ಬಳ್ಳಿಯ ಬೇರುಗಳಿಗೆ ಬಿದ್ದೊಡೆ ಬಳ್ಳಿಯು ಆಕಾಶಕ್ಕೆ ಮುಟ್ಟುವ ಹಾಗೆ ಬೆಳೆಯತೊಡಗಿತು.ಕ್ಷಣ ಮಾತ್ರದಲ್ಲಿ ಗಿಡವು ಭೂಮಿಯಲ್ಲಿ ಬೇರೂರಿ ತನ್ನ ಹೂವನ್ನು ಕೈಲಾಸದಲ್ಲಿ ಕಾಣಿಸಿಕೊಳ್ಳುವಂತೆ ಆಯಿತು.ಪಾರ್ವತಿ ದೇವಿಗೂ ಆನಂದವಾಯಿತು ಮತ್ತು ಭೂದೇವಿಯೂ ಮಲ್ಲಿಗೆ ಬಳ್ಳಿಗೆ ಕೊಂಚವೂ ನೋವಾಗದಂತೆ ಕೈಲಾಸಕ್ಕೆ ಹೋಗಿದ್ದನು ಕಂಡು ಆನಂದವಾಯಿತು.
ಮಲ್ಲಿಗೆ ಹೂವು ಕೈಲಾಸಕ್ಕೆ ಬಂದುದು ಎಲ್ಲರಿಗೂ ಆನಂದವಾಯಿತು.ಸೂರ್ಯ ,ಚಂದ್ರ,ಲಕ್ಷ್ಮಿ,ಎಲಾ ದೇವಾನುದೇವತೆಗಳೂ ಕೂಡ ಮಲ್ಲಿಗೆಯ ಅಂದವನ್ನು,ಅದರ ಶುಭ್ರವಾದ ಹಾಲಿನಂತ ಬಣ್ಣವನ್ನು ಹಾಡಿ ಹೊಗಳಿದರು.ಭೂಮಿಯಿಂದ ನೋಡಿದರೆ ಮಿನುಗುವ ನಕ್ಷತ್ರಗಳಂತೆ ಕಾಣುತ್ತಿದ್ದವು.ಆದರೆ ಮಲ್ಲಿಗೆ ಹೂವನ್ನು ಕಂಡು ನಾರದರಿಗೆ ಏಕೋ ಬಹಳ ಅಸೂಯೆಯುಂಟಾಯಿತು.ಒಂದು ಯಃಕಶ್ಚಿತ್ ಭೂಲೋಕದ ಕುಸುಮ,ಕೈಲಾಸದಲ್ಲಿ ಹೊಗಳಿಕೆಯ ಅಭಿಷೇಕ ಎಂದು ಯೋಚಿಸುತ್ತಾ ಹೇಗಾದರೂ ಮಾಡಿ ಇದನ್ನು ಕೈಲಾಸದಿಂದ ಹೊರಹಾಕಬೇಕು ಎಂದು ಹವಣಿಸುತ್ತಿದ್ದರು. ಅವರು ಒಂದು ಉಪಾಯ ಮಾಡಿ ನೇರವಾಗಿ ಚಂದ್ರನಲ್ಲಿಗೆ ಹೋಗಿ " ಅಯ್ಯಾ ಚಂದ್ರ ,ನೋಡಿದೆಯಾ ನಮ್ಮ ಭೂಲೋಕದ ಮಲ್ಲಿಗೆಯ ಮಹಿಮೆಯನ್ನು ,ನಿನಗೆ ಸರಿಸಾಟಿಯಾಗಿ ಬೆಳಕನ್ನು ಹರಿಸುತ್ತಿದ್ದಾಳೆ.ಇನ್ನು ಕೆಲವಷ್ಟೆ ದಿನ,ಇನ್ನಷ್ಟು ಮಲ್ಲಿಗೆ ಗಿಡಗಳನ್ನು ಪರಮೇಶ್ವರನು ಮಲ್ಲಿಗೆ ಗಿಡಗಳನ್ನು ದೇವಲೋಕಕ್ಕೂ,ವೈಕುಂಠ,ಸತ್ಯಲೋಕಗಳಿಗೂ ತರುವನಂತೆ,ಆಗ ನಿನ್ನ ಬೆಳಕು ಯಾರಿಗೆ ಬೇಕು ? ಯಾರು ಇರುಳಿನಲ್ಲಿ ನಿನ್ನ ಬೆಳಕು ಬೇಡ,ನೀನೊಬ್ಬ ನಿಷ್ಪ್ರಯೋಜಕನಾಗಿ ಬಿಡುತ್ತೀಯಾ " ಎಂದು ಹೇಳಲು ಚಂದ್ರನು ನಾರದರು ಹೇಳಿದ ಮಾತನ್ನು ನಂಬಲು ತಾನು ಮುಂದೆ ಏನು ಮಾಡಬೇಕೆಂದು ಕೇಳಲು ,ನಾರದರು ಚಂದ್ರನಿಗೆ ಭೂಲೋಕಕ್ಕೆ ಹೋಗಿ ಮಲ್ಲಿಗೆ ಬಳ್ಳಿಗಳನ್ನು ಕಡಿದು ಬರುವಂತೆ ಹೇಳಿದನು.
ನಾರದರ ಮಾತಿನಂತೆ ಚಂದ್ರನು ನಡೆಯಲು ,ಚಂದ್ರನು ಮಲ್ಲಿಗೆ ಬಳ್ಳಿಗಳನ್ನು ಭೂಲೋಕದಲ್ಲಿ ಕತ್ತರಿಸಲು ಕೈಲಾಸದಲ್ಲಿದ್ದ ಮಲ್ಲಿಗೆ ಬಳ್ಳಿ,ಹೂವುಗಳು ಭೂಮಿಗೆ ಕಳಚಿಬಿದ್ದವು.ಒಡನೆಯೇ ಚಂದ್ರನ ದುಸ್ಸಾಹಸವನ್ನು ಕಂಡು ಗಂಗಾಧರನು ಕೋಪಾಗ್ನಿಯಾದನು.ಚಂದ್ರನು ಪರಮೇಶ್ವರನಿಗೆ ಹೆದರಿ ಕಕ್ಕಾಬಿಕ್ಕಿಯಾದನು.ಪರಮೇಶ್ವರನು ಚಂದ್ರನನ್ನು ಕುರಿತು " ನೀನು ಯಾವ ಕಾರಣಕ್ಕೆ ಈ ಕಾರ್ಯವನ್ನು ಮಾಡಿದೆ ಎಂದು ನಾನು ಕೇಳುವುದಿಲ್ಲ,ಆದರೆ ಇನ್ನು ಮುಂದೆ ನಿನ್ನ ಮುಖವನ್ನು ಯಾವ ಕಾರಣಕ್ಕೂ ನನಗೆ ತೋರಿಸಬೇಡ ,ಹೊರಟುಹೋಗು " ಎಂದು ಹೇಳಲು ಚಂದ್ರನು ಪರಮೇಶ್ವರನನ್ನು ಕುರಿತು "ಅಯ್ಯ ಗಿರಿಜಾ ರಮಣ ,ನನ್ನ ತಪ್ಪನ್ನು ಮನ್ನಿಸುವಂತನಾಗು ,ಸಕಲ ಲೋಕಗಳೂ ನಿನ್ನ ಆಳ್ವಿಕೆಯಲ್ಲೇ ಇದೆ .ಇನ್ನೂ ನಾನು ನಿನಗೆ ಕಣ್ಣಿಗೆ ಕಾಣದಂತೆ ಹೋಗಲೂ ಸಾಧ್ಯವೆ? .ನಿನ್ನ ಕರುಣೆ ಇಲ್ಲದೆ ನಾನು ಬದುಕಲು ಸಾಧ್ಯವೇ ಎಂದು ಗೋಳಿಟ್ಟನು.
ಅದೇ ಸಮಯಕ್ಕೆ ನಾರದರು ಅಲ್ಲಿಗೆ ಬಂದು " ಪರಮೇಶ್ವರ ,ಚಂದ್ರನು ಹೇಳುತ್ತಿರುವುದು ಸತ್ಯ.ಅಣುವಿನಿಂದ ಹಿಡಿದು ಈ ಲೋಕವೆಲ್ಲವೂ ನಿನ್ನ ಅನುಗ್ರಹಕ್ಕೆ ಪಾತ್ರವಾಗಿರುವುದು ,ಇನ್ನು ಚಂದ್ರನು ಎಲ್ಲಿ ಹೋಗಿಯಾನು ? ಆದರೂ ನೀನು ಅವನಿಗೆ ಕೊಟ್ಟ ಶಾಪವೂ ನಡೆಸಬೇಕು ,ಆದ್ದರಿಂದ ನಾನೊಂದು ಸಲಹೆಯನ್ನು ಕೊಡುವೆನೆಂದು ಎಂದು ಹೇಳಲು ,ಪರಮೇಶ್ವರನು ಸಮ್ಮತಿಸಲು ," ಗಂಗಾಧರ,ಯಾರಿಗಾಗಲಿ ತಮ್ಮ ತಲೆಯ ಮೇಲಿರುವರು ಕನ್ನಡಿಯ ಮುಂದೆ ನಿಂತಲ್ಲಿ ಮಾತ್ರ ಕಾಣುವರು,ನಮ್ಮ ಕಣ್ಣಿನಿಂದ ನೋಡಲು ಸಾಧ್ಯವೇ ಇಲ್ಲ,ಆದ್ದರಿಂದ ನೀನು ಚಂದ್ರನನ್ನು ಗಂಗೆಯಂತೆ ಚಂದ್ರನನ್ನು ಧರಿಸಿದರೆ,ಚಂದ್ರನೂ ನಿನ್ನ ಶಾಪವನು ಅನುಭವಿಸಿದಂತಾಗುತ್ತದೆ ಹಾಗೂ ಚಂದ್ರನೂ ಸದಾ ನಿನ್ನ ಅನುಗ್ರಹದಲ್ಲಿಯೇ ಇರುವನು " ಎಂದು ಹೇಳಿದರು.ಪರಮೇಶ್ವರ ಮತ್ತು ಚಂದ್ರರಿಗೆ ಈ ಸಲಹೆ ಸೂಕ್ತವೆಂದು ಭಾವಿಸಿ ಪರಮೇಶ್ವರನು ಚಂದ್ರನನ್ನು ಹೂವನ್ನು ಮುಡಿದಂತೆ ಮುಡಿದು ಚಂದ್ರಶೇಖರನಾದನು.
||ಶ್ರೀಚಂದ್ರಶೇಖರ ಪಾಹಿಮಾಂ,ಶ್ರೀಚಂದ್ರಶೇಖರ ರಕ್ಷಮಾಂ ||
ಅಭಿಲಾಷ್ ಟಿ ಬಿ
ತಿಪಟೂರು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ