ಗುರುವಾರ, ಮಾರ್ಚ್ 9, 2017

ಅಜ್ಜಿ ಹೇಳಿದ ಕಥೆ:ಪುಟ್ಟಿಯ ಮಾವಿನಮರ

ಅಜ್ಜಿ ಹೇಳಿದ ಕಥೆ:ಪುಟ್ಟಿಯ ಮಾವಿನಮರ
ಒಂದಾನೊಂದು ಕಾಲದಲ್ಲಿ ಮಾವಿನಹಳ್ಳಿಯೆಂಬ ಹಳ್ಳಿಯಿತ್ತು.ಆ ಹಳ್ಳಿಯಲ್ಲಿ ತುಂಬಾ ತೋಟಗಳು,ಹೊಲ ಗದ್ದೆಗಳು ಎಲ್ಲವೂ ಇದ್ದವು.ಒಂದು ತೋಟದಲ್ಲಿ ಅಲ್ಲೇ ಮನೆಯನ್ನು ಕಟ್ಟಿಕೊಂಡು ನಾಲ್ಕನೇ ಕ್ಲಾಸು ಓದುತ್ತಿದ್ದ ಪುಟ್ಟಿ ತನ್ನ ಅಪ್ಪ ಅಮ್ಮ ತಮ್ಮನ ಜೊತೆ ವಾಸಮಾಡುತ್ತಿದ್ದಳು.ಪುಟ್ಟಿಯ ತೋಟದಲ್ಲಿ ಮಾವು ,ಹಲಸು ,ನೆಲ್ಲಿಕಾಯಿ,ಸೀಬೆ ,ತೆಂಗು ,,ಬಾಳೆ ಹೀಗೆ ಎಷ್ಟೊಂದು ಬಗೆಯ ಮರಗಳಿದ್ದವು ಹಾಗೂ ಪುಟ್ಟಿಯು ಇವೆಲ್ಲವನ್ನು ತಿಂದು ತಮ್ಮನೊಡನೆ ಆಟವಾಡುತ್ತಾ ಖುಷಿಯಿಂದ ಇದ್ದಳು.
ಹೀಗೆ ಮಾವಿನ ಹಣ್ಣು ಬಿಡುವ ಸಮಯದ ಬಂದಿತು.ಪುಟ್ಟಿ ಖುಷಿಯಿಂದ ಮಾವಿನ ಹಣ್ಣನ್ನು ತಿನ್ನಬಹುದು ಎಂದು ಖುಷಿಪಡುತ್ತಿದ್ದಳು.ಆದರೆ ಈ ಬಾರಿ ಮಾವಿನ ಗಿಡಕ್ಕೆ ರಾಕ್ಷಸಿಯೊಂದು ಬಂದು ಸೇರಿಕೊಂಡಿತ್ತು.ಆ ರಾಕ್ಷಸಿಯು ಒಂದೊಂದು ಹಣ್ಣು ಬಿಟ್ಟ ಕೂಡಲೆ ಅದನ್ನು ಗುಳುಂ ಗುಳುಂ ಎಂದು ತಿಂದು ಬಿಡುತ್ತಿತ್ತು.ಆದ್ದರಿಂದ ಪುಟ್ಟಗೆ ಮತ್ತು ಅವಳ ಮನೆಯವರಿಗೆಲ್ಲ ಹಣ್ಣು ಇಲ್ಲದಂತೆ ಆಗುತ್ತಿತ್ತು.ಪುಟ್ಟಿಯ ಮನೆಯವರೆಲ್ಲರೂ ಕೂಡಿ ಆ ರಾಕ್ಷಸಿಯನ್ನು ಓಡಿಸಲು ಒಂದು ಉಪಾಯವನ್ನು ಮಾಡಿದರು.
ಪುಟ್ಟಿಯ ಅಮ್ಮ ,ಪುಟ್ಟಿಯನ್ನು ಜೊತೆಯಲ್ಲೆ ಮಾವಿನ ಮರದ ಹತ್ತಿರ ಕರೆದುಕೊಂಡು ಬಂದು ರಾಕ್ಷಸಿಗೆ ಕೇಳುವ ಹಾಗೆ ಜೋರಾಗಿ ಹೇಳಿದಳು " ನೋಡು ಪುಟ್ಟಿ ,ಈ ಮಾವಿನ ಹಣ್ಣನ್ನು ತಿಂದರೆ ಬೇಗನೆ ಮುಪ್ಪು ಬರುತ್ತದೆ,ಕೂದಲುಗಳು ಬಿಳುಪಾಗುತ್ತದೆ,ಆಗ ನಿನ್ನನ್ನು ಯಾರೂ ಮದುವೆಯಾಗುವುದಿಲ್ಲ ,ಆದ್ದರಿಂದ ನೀನು ಈ ಊರಿನ ಹೊರಗಡೆ ಇರುವ ಹುಣಸೆ ಹಣ್ಣನ್ನು ತಿನ್ನು,ತುಂಬಾ ಸುಂದರವಾಗುತ್ತೀಯಾ " ಎಂದು ಹೇಳಿದಳು.
ಇದನ್ನು ಕೇಳಿಸಿಕೊಂಡ ರಾಕ್ಷಸಿಗೆ ಭಯವಾಯಿತು ಪುಟಾಣಿಗಳ.ಮೊದಲೇ ಕುರೂಪಿಯಾಗಿದ್ದ ರಾಕ್ಷಸಿಗೆ ತನಗೆ ಇನ್ನು ಮುಪ್ಪು ಬಂದರೆ ತನ್ನನ್ನು ಯಾರು ಮದುವೆಯಾಗುವುದಿಲ್ಲ ಎಂದು ಹೆದರಿ ಮಾವಿನ ಮರದಿಂದ ಹುಣಸೆ ಮರಕ್ಕೆ ಓಡಿಹೋಯಿತು.ಪುಟ್ಟಿ ತನ್ನ ಅಮ್ಮನ ಬುದ್ಧಿವಂತಿಕೆಯಿಂದ ಸಿಹಿಯಾದ ಮಾವಿನ ಹಣ್ಣನ್ನು ತಿನ್ನುವಂತಾಯಿತು.
ಅವತ್ತಿನಿಂದ ಊರ ಹೊರಗಿನ ಹುಣಸೆ ಮರದ ಹತ್ತಿರಕ್ಕೆ ಹೋಗುವುದಕ್ಕೆ ಊರಿನ ಜನ ಹೆದರಿಕೊಳ್ಳುತ್ತಾರಾಂತೆ ಪುಟ್ಟಾಣಿಗಳ.
ಅಭಿಲಾಷ್ ಟಿ ಬಿ
ತಿಪಟೂರು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ