ಸೋಮವಾರ, ಮಾರ್ಚ್ 13, 2017

ಅಜ್ಜಿ ಹೇಳಿದ ಕಥೆ: ಕಪಟ ಬೆಕ್ಕು.

ಅಜ್ಜಿ ಹೇಳಿದ ಕಥೆ: ಕಪಟ ಬೆಕ್ಕು.
ಒಂದು ಊರಿನಲ್ಲಿ ಒಂದು ಅಜ್ಜಿ ಇತ್ತು.ಆ ಅಜ್ಜಿಗೆ ಒಂದು ಮೊಮ್ಮಗಳೂ ಇದ್ದಳು.ಅಜ್ಜಿಗೆ ಮೊಮ್ಮಗಳನ್ನು ಕಂಡರೆ ತುಂಬಾ ಪ್ರೀತಿಯಿತ್ತು.ಆದರೆ ಅಜ್ಜಿಗೆ ಮೊಮ್ಮಗಳನ್ನು ನೋಡಲು ಆಗುತ್ತಿರಲಿಲ್ಲ.ಯಾಕೆ ಗೊತ್ತಾ ಪುಟಾಣಿಗಳ? ಅಜ್ಜಿಯ ಎರಡು ಕಣ್ಣುಗಳು ಹೋಗಿಬಿಟ್ಟಿದವು.ಅಂದರೆ ಅಜ್ಜಿಗೆ ಕಣ್ಣೆ ಕಾಣುತ್ತಿರಲಿಲ್ಲ.
ಅಜ್ಜಿಗೆ ಕಣ್ಣು ಕಾಣುತ್ತಿರಲಿಲ್ಲವಾದ್ದರಿಂದ ಮೊಮ್ಮಗಳು ತಾನು ಶಾಲೆಗೆ ಹೋದಾಗ ಅಜ್ಜಿಯ ಸಹಾಯಕ್ಕೆಂದು ಒಂದು ನಾಯಿ ,ಒಂದು ಬೆಕ್ಕನ್ನು ತಂದು ಸಾಕಿದಳು.ಬೆಕ್ಕು ,ನಾಯಿಗಳು ಅಜ್ಜಿ ಹೋದಲೆಲ್ಲ ಕರೆದುಕೊಂಡು ಹೋಗುತ್ತಿದ್ದವು. ನಾಯಿ ಬೆಕ್ಕುಗಳು ತುಂಬಾ ಅನ್ಯೋನ್ಯವಾಗಿರುವುದನ್ನು ಕಂಡು ಅಜ್ಜಿಗೂ ಖುಷಿಯಾಗಿತ್ತು.
ಒಂದು ದಿನ ಅಜ್ಜಿ ತನ್ನ ಮೊಮ್ಮಗಳಿಗೆ ಎಂದು ಸಿಹಿಯಾದ ರವೆಉಂಡೆಯನ್ನು ಮಾಡಿ ,ನಾಯಿ ಬೆಕ್ಕುಗಳಿಗೂ ಒಂದೊಂದು ಕೊಟ್ಟು ಡಬ್ಬಿಯಲ್ಲಿ ಇಟ್ಟಿದ್ದಳು.ಮೊಮ್ಮಗಳು ಬಂದ ಕೂಡಲೆ ಅಜ್ಜಿ ಡಬ್ಬಿಯನ್ನು ತೆಗೆದರೆ ಡಬ್ಬಿಯಲ್ಲಿ ಒಂದೂ ರವೆಉಂಡೆ ಇರಲಿಲ್ಲ.ಅಜ್ಜಿಗೆ ನಾಯಿ,ಬೆಕ್ಕಿನ ಮೇಲೆ ಅನುಮಾನ ಬಂದಿತು.ಆದರೂ ಮಾರನೆಯ ದಿನ ಮತ್ತೆ ರವೆಉಂಡೆಯನ್ನು ಮಾಡಿ ಇಟ್ಟಳು.ಮೊಮ್ಮಗಳು ಬಂದಾಗ ನೋಡಿದರೆ ಡಬ್ಬಿಯೆಲ್ಲ ಖಾಲಿ.ಅಜ್ಜಿಗೆ ಇರುವ ಇಬ್ಬರಲ್ಲಿ ಕದ್ದವರು ಯಾರು? ಎಂದು ಅನುಮಾನ ಹುಟ್ಟಿತು.
ಮಾರನೆಯ ದಿನ ಹೇಗಾದರೂ ಮಾಡಿ ಕಳ್ಳನನ್ನು ಕಂಡುಹಿಡಿಯಬೇಕೆಂದು ,ರವೆಉಂಡೆ ಮಾಡುತ್ತಾ ಒಂದೊಂದು ಉಂಡೆ ಮಾಡುತ್ತಾ ,ಅದರೊಳಗೆ ಒಂದೊಂದು ಮೆಣಸಿನ ಕಾಳನ್ನು ಇಟ್ಟಳು.ಎಂದಿನಂತೆ ಕಳ್ಳ ಡಬ್ಬಿ ತೆಗೆದು ರವೆಉಂಡೆ ತಿನ್ನಬೇಕಾದರೆ ಬಾಯಿಯೆಲ್ಲ ಖಾರವಾಗಿ ಜೋರಾಗಿ ಬೊಗಳಕ್ಕೆ ಶುರುಮಾಡಿತು.ಅಜ್ಜಿಗೆ ಕಳ್ಳ ಸಿಕ್ಕಿದನು.ನಾಯಿಯನ್ನು ಕರೆದು ಜೋರಾಗಿ ಹೊಡೆದಳು.ನಾಯಿ ಜೋರಾಗಿ ಅಳಲು ಶುರು ಮಾಡಿತು.
ಪುಟಾಣಿಗಳ,ನಿಜವಾಗಿ ರವೆ ಉಂಡೆಯನ್ನು ಯಾರು ಕದಿಯುತ್ತಿದ್ದರು ಗೊತ್ತಾ? ಖಾರವಾದ ಉಂಡೆಯನ್ನು ತಿಂದ ಬೆಕ್ಕು ಅಜ್ಜಿ ಹೊಡೆಯುತ್ತಾಳೆಂದು ಗೊತ್ತಾಗಿ ನಾಯಿಯಂತೆ ಬೊಗಳಿತು.ಮಿತ್ರ ದ್ರೋಹ ಮಾಡಿತು ಕಪಟ ಬೆಕ್ಕು.
ಅಭಿಲಾಷ್ ಟಿ ಬಿ
ತಿಪಟೂರು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ