ಬುಧವಾರ, ಮಾರ್ಚ್ 15, 2017

ಭೀಮರಥಿ

ಭೀಮರಥಿ 

 ಬ್ಯಾಸಗಿ ದಿವಸಾಗ ಬೇವಿನ ಮರ ತಂಪು|
ಭೀಮರಥಿ ಎಂಬ ಹೊಳಿ ತಂಪು||
ಹಡೆದವ್ವ,ನೀ ತಂಪು ನನ್ನ ತವರಿಗೆ|

ಅದೊಂದು ಬೆಟ್ಟಗಳ ಸಾಲು,ದಟ್ಟ ಕಾನನ,ಹುಲಿ,ಕಿರುಬ,ಜಿಂಕೆ ಸಹಿತವಾಗಿ ಅಲಲ್ಲಿ ಒಂದೊಂದು ಗ್ರಾಮಗಳು ಇದ್ದವು.ಆ ಗ್ರಾಮದ ಜನರು ಯಾವಾಗಲು ಕೊಲೆ,ದರೋಡೆ ಮುಂತಾದವುಗಳಲ್ಲೆ ತೊಡಗಿದ್ದರು.ಅವರು ಈ ಪಾಪ ಕರ್ಮಗಳನ್ನು ಕಳೆದುಕೊಳ್ಳಲು ಬೆಟ್ಟದ ಮೇಲಿದ್ದ ಭೀಮರಥಿಯೆಂಬ ತಂಪಾದ ಪವಿತ್ರ ಕಲ್ಯಾಣಿಯಲ್ಲಿ ತಮ್ಮ ಪಾಪವನ್ನು ತೊಳೆದುಕೊಳ್ಳುತ್ತಿದ್ದರು.
ಈ ರೀತಿ ಅವರು ಮಾಡಿದ ಪಾಪ ಕರ್ಮಗಳೆಲ್ಲ ಭೀಮರಥಿಯೊಳಗೆ ಸೇರಿಕೊಂಡು ,ಭೀಮರಥಿಯ ಒಡಲು ತುಂಬ ಪಾಪಗಳೇ ತುಂಬಿಕೊಂಡಿತು."ಗ್ರಾಮದ ಜನರು ತಾವು ಮಾಡಿದ ಪಾಪಗಳನ್ನು ತನ್ನಲ್ಲಿ ಕರಗಿಸಿಕೊಳ್ಳುತ್ತಿದ್ದಾರೆ,ತಾನು ಈ ಪಾಪಗಳನ್ನು ಎಲ್ಲಿ ಕರಗಿಸುವುದು, ಈ ತಂಪಾದ ನನ್ನ ಹೊಟ್ಟೆ ಬಿಸಿಯಾಗುತ್ತಿದೆ " ಎಂದು ಯೋಚನೆ ಹೆಚ್ಚಾಗಿ ಮಹರ್ಷಿಗಳಾದ ನಾರದರ ಬಳಿ ತನ್ನ ಕಷ್ಟವನ್ನು ಹೇಳಿಕೊಂಡಿತು.
ನಾರದರು ಭೀಮರಥಿಯನ್ನು ಕುರಿತು," ಎಲೈ ,ಭೀಮರಥಿಯೇ,ನಿನ್ನ ಒಡಲು ಈ ಗ್ರಾಮದ ಜನರ ಪಾಪಗಳಿಂದ ತುಂಬಿಹೋಗಿದೆ.ಆ ಪರಿಹಾರಕ್ಕಾಗಿ ನೀನು ಈಗಲೇ ದಕ್ಷಿಣಾಭಿಮುಖವಾಗಿ ಹರಿದು ,ಅಲ್ಲಿ ಪಂಡರಾಪುರವೆಂಬ ಸ್ಥಳ ಸಿಗುವುದು,ಅಲ್ಲಿ ಪಾಂಡುರಂಗನ ದರ್ಶನ ಪಡೆದು,ಹಾಗೆ ಮುಂದೆ ಸಾಗಿದರೆ ಕೃಷ್ಣವೇಣಿಯೆಂಬ ಮಹಾಪತಿವ್ರತೆ ಸಿಗುವಳು.ನೀನು ಅವಳನ್ನು ಸೇರಿದೊಡೆ ,ನೀನು ಈ ಜನರ ಪಾಪದಿಂದ ಮುಕ್ತಿಹೊಂದುವೆ " ಎಂದು ಹೇಳಿದರು.
ಭೀಮರಥಿ ನಾರದರು ನುಡಿದಂತೆ ನಡೆದುಕೊಂಡಿತು.ಪಂಡರಾಪುರದಲ್ಲಿ ಪಾಂಡುರಂಗನ ದರ್ಶನ ಪಡೆದು ,ಮುಂದೆ ಸಾಗಿ ಕೃಷ್ಣವೇಣಿ ಎಂಬ ನದಿಯನ್ನು ಸೇರಿತು.
ಅಂದು ಭೀಮರಥಿಯ ಉದರದಲ್ಲಿ ಅಡಗಿದ್ದ ಜನರ ಪಾಪಗಳೆಲ್ಲ ಪಾಂಡುರಂಗನ ದರ್ಶನದಿಂದ ಮತ್ತು ಮಹಾಪತಿವ್ರತೆಯಾದ ಕೃಷ್ಣವೇಣಿಯ ಸಹಾಯದಿಂದ ಕರಗಿಹೋಯಿತು.ಮತ್ತೆ ಭೀಮರಥಿ ಒಡಲು ತಂಪಾಯಿತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ