ಮಂಗಳವಾರ, ಜನವರಿ 24, 2017

ಶ್ರೀರಂಗ ಬಂದ ......

ಶ್ರೀರಂಗ  ಬಂದ ......

೧೫. 

ಕೃಷ್ಣ ಕೊಳಲು ನುಡಿಸಿದಾಗ ಏನಾಯ್ತು ಅಂತ ಅಜ್ಜಿ ಹೇಳಿದ ಕಥೆ...
ಸಂಗೀತ ಸ್ವರಗಳೇ ರಥವನ್ನೇರಿದವು|
ಕೃಷ್ಣನ ಕೊಳಲಿನ ಗಾನವ ಹಿಂಬಾಲಿಸಲು||
ಊರುಗೋಲು ಕೈಯಲಿ,ಬಾಗಿದ ಬೆನ್ನು|
ಮುದುಕಿಯು ತಟ್ಟನೆ ನೆಟ್ಟಗೆ ನಿಂತಳು||
ಕರೆಯದೆ ,ನಿಂತಿಪ ಗೊಡ್ಡು ಹಸುವು|
ಬಿಂದಿಗೆ ಕಂಟ ತನಕ ಕೃಷ್ಣಗೆ ಹಾಲ ಸುರಿಸಿತು||
ನೂರು ಗೋವುಗಳ ಕೊಂದ ಹುಲಿಯು|
ಪಾಪ ಪ್ರಜ್ಞೆಯಿಂದ ಹರಿಯ ಧ್ಯಾನಿಸಿತು||
ಕೈಲಾಸೇಶ್ವರ ಪರಮೇಶ್ವರ ಪಾರ್ವತಿದೇವಿ|
ಢಮರುಗ ಮರೆತು ವೇಣುಗಾನಕ್ಕೆ ಮನಸೋತರು||
ನಾ ಮುಂದು ತಾ ಮುಂದು,ಸರಿಗಮ ಕಿತ್ತಾಡಿ|
ಸ್ವರ ಲಯಗಳೇ ಲೋಕವನ್ನು ಆವರಿಸಿತು||
ಕಲ್ಲು ತುಂಬಿದ ಗಟ್ಟಿ ಹೃದಯದ ಗಡಿಗೆಗಳಲ್ಲೂ
ಶುಭ್ರವಾದ ನವನೀತವ ಕಡೆಯಿತು ಕೃಷ್ಣನ ಮುರಳಿಯ ಗಾನ||
ಅಭಿಲಾಷ್ ಟಿ ಬಿ
ತಿಪಟೂರು

೧೪. 
ಹನುಮನ ರೋಮ ರೋಮಗಳು ರಾಮ ರಾಮ ಎನ್ನುತ್ತಿದ್ದವಂತೆ.ಆದರೆ ಈ ಕಲಿಯುಗದಲ್ಲಿ ಅದು ಕಷ್ಟ ಸಾಧ್ಯ .ನಮಗೆ ಸಾಧ್ಯವಾದಲ್ಲಿ " ಭೋಜನ ಕಾಲೇ: ಸೀತಾಕಾಂತ ಸ್ಮರಣೆ" ಮಾಡುಬಹುದಲ್ಲವೇ?. ಕಾಣದ ಶಕ್ತಿಯೊಂದು ನಮ್ಮನ್ನು ನಡೆಸುತ್ತಿದೆ.ಅದನ್ನು ಪರೀಕ್ಷೆಗೆ ಒಳಪಡಿಸದೆ ಸರ್ವೋತ್ತಮನಾದ ಶ್ರೀಹರಿಯನ್ನು ಧ್ಯಾನಿಸೋಣ.
ಹುಚ್ಚು ಹಿಡಿಸಿಕೊಳ್ಳಿರೋ,ಹುಚ್ಚಪ್ಪಗಳಿರಾ|
ಶ್ರೀಹರಿಯ ಧ್ಯಾನಿಸೋ,ಹುಚ್ಚುಹಿಡಿಸಿಕೊಳ್ಳಿರೋ||
ಕೌಸಲ್ಯ ನಂದನನ,ಪಿತೃ ವಾಕ್ಯ ಪರಿಪಾಲಕನ|
ಸೌಮಿತ್ರಿ ,ಭರತರು ಅನುಸರಿಸಿದವನನ ಧ್ಯಾನಿಸಿರೋ|
ಕರೆದರೆ ಹೆಂಡತಿ ಬರುವುದ ನಾ ಕಾಣೆ|
ಕರೆದೊಡೆ ನಿನ್ನ ಮುಂದೆ ಬರುವ ಶ್ರೀಹರಿಯ ಧ್ಯಾನಿಸಿರೋ||
ನಾನು,ನನ್ನದು ಎಂಬ ಅಹಂಭಾವವ ಬಿಟ್ಟು|
ಇಂದಿರಾ ರಮಣನ ಮನದಲ್ಲೇ ಧ್ಯಾನಿಸಿರೋ|
ಕೃಷ್ಣ ತತ್ವ ತುಂಬಿರೋ ಮೊಸರು ಬೆಣ್ಣೆಯ ಉಂಡು|
ಹನುಮನಂತೋ,ನಾರದರಂತೋ ನಾರಾಯಣನ ಧ್ಯಾನಿಸಿರೋ||
"ಶ್ರೀರಾಮ ಜಯ ರಾಮ ಜಯ ಜಯ ರಾಮ"
ಆಭಿಲಾಷ್ ಟಿ ಬಿ
ತಿಪಟೂರು



೧೩. 
ನಮ್ಮ ಜೀವನವು ಯಾವಾಗ ಸಾರ್ಥಕವಾಗುತ್ತದೆ.?ನಾವು ಗಳಿಸಿದ್ದರಲ್ಲಿ ಒಂದಿಷ್ಟನ್ನು ತನಗೆ,ಒಂದಿಷ್ಟನ್ನು ಇತರರಿಗೂ ಕೊಟ್ಟರೆ ಸಾರ್ಥಕವಾಗುತ್ತದೆ.ಹಾಗೆ ಇನ್ನೂ ಮುಂದುವರೆದು,ಮಹಾವಿಷ್ಣುವನ್ನು ನೆನೆದರೆ ನಮ್ಮ ಜೀವನ ಎಲ್ಲಿಯೂ ಅಡೆತಡೆಗಳಿಲ್ಲದೆ ಸಾಗುತ್ತದೆ ಹಾಗೂ ಎಲ್ಲವನ್ನೂ ಶ್ರೀಹರಿಗೆ ಸಮರ್ಪಿಸು ಎಂಬ ಭಾವವನ್ನು ಕೆಳಗಿನ ಸಾಲುಗಳು ವ್ಯಕ್ತ ಪಡಿಸುತ್ತವೆ.
ತಾಳಮೇಳವ ಕಟ್ಟಿ ಕುಣಿದರೇನು ಫಲ |
ಶ್ರೀರಂಗನ ನೆನೆಯದೆ,ಮನುಜ||


ಹತ್ತು ಕಣಜ ಭತ್ತವ ಕೂಡಿಟ್ಟರೇನು ಫಲ|
ಹತ್ತು ಮಂದಿಗೆ ಉಣ್ಣಲು ಇಡದ ಮನೆಯಲ್ಲಿ||
ನೂರು ಗೋವುಗಳ ಕೊಟ್ಟಿಗೆಯಲ್ಲಿ ಕಟ್ಟಿದರೇನು ಫಲ|
ಸಾಲಿಗ್ರಾಮಕೆ ಹಾಲನ್ನು ಅಭಿಷೇಕ ಮಾಡದ ಮನೆಯಲ್ಲಿ||
ಮಠ ,ಮಂದಿರವ ಕಟ್ಟಿಸಿದರೇನು ಫಲ|
ಗೀತೆಯ ಭೋದಿಸದ ,ಭಾರತವ ತಿಳಿಸಿದ ಗುರುವಿಲ್ಲದಲ್ಲಿ||
ರಾಮ ರಥವನ್ನು ಎಳೆದರೇನು ಫಲ|
ನಾಲಿಗೆ ಮೇಲೆ ಹರಿನಾಮವು ನಿಲ್ಲದಿರುವಾಗ||
ವೇದ ಶಾಸ್ತ್ರವ ಓದಿದರೇನು ಫಲ|
ರಾಮಾಯಣವ ಪಾರಾಯಣವ ಮರೆತವಗೆ||
ಏಕ ಚಿತ್ತದಿ ಶ್ರೀಹರಿಯ ಧ್ಯಾನಿಸೋ|
ಅವನ್ನಲ್ಲವೆ ನಮ್ಮನು ಸಲಹುತ್ತಿರುವ ತಂದೆಯು||
"ಶ್ರೀರಾಮ ಜಯ ರಾಮ ಜಯ ಜಯ ರಾಮ"

ಅಭಿಲಾಷ್ ಟಿ ಬಿ
ತಿಪಟೂರು


೧. 
ಬೆಣ್ಣೆ ಕದ್ದ ಕೃಷ್ಣ....
ಕನ್ನ ಹಾಕಿದನೋ ಬೆಣ್ಣೆಯ ಗಡಿಗೆಗೆ|
ಗೋಪಾಲ ಬಾಲಕ ಕೃಷ್ಣಪರಮಾತ್ಮನು||

ಸಿರಿದೇವಿ ಮಹಾಲಕ್ಷ್ಮೀ ಮೊದಲಾಗಿ|
ರುಕ್ಮಿಣಿ ,ಸತ್ಯಭಾಮೆಯರ ಹೃದಯಕ್ಕೆ ಕನ್ನಹಾಕಿದನೋ||
ಕೌಸಲ್ಯೆ ಮಾತೆಯ ಜೋಗುಳವನುಭವಿಸಿ|
ಯಶೋಧೆ ದೇವಿಯ ತಾಯಿ ಮಮತೆಗೆ ಕನ್ನ ಹಾಕಿದನೋ||
ಅಣ್ಣನ ವಾತ್ಸಲ್ಯಕ್ಕೆ ಲಕ್ಷಣನ ಕನ್ನ|
ಗೆಳೆತನ ವಿಶ್ವಾಸಕ್ಕೆ ಕುಚೇಲನ ಕನ್ನ||
ಇಳೆಯನ ಪ್ರೀತಿಗೆ ರಾಧೆಯ ಕನ್ನ|
ನೀ ಬೋಧಿಸಿದ ಗೀತೆ,ಆಡಿದ ಹುಡುಗಾಟಗಳಿಗೆ ಈ ಕಂದನ ಕನ್ನ ಕೃಷ್ಣ||
"ಶ್ರೀರಾಮ ಜಯ ರಾಮ ಜಯ ಜಯ ರಾಮ"
ಅಭಿಲಾಷ್ ಟಿ ಬಿ
ತಿಪಟೂರು

೨. 
ಉಡುಪಿಯ ಶ್ರೀಕೃಷ್ಣನೇ ನಮ್ಮ ಮಿತ್ರ...
ಬಂಧು ಬಳಗ ಏತಕ್ಕೆ ಕೃಷ್ಣ|
ನೀನೆ ನನ್ನ ಮಿತ್ರನಾಗಿರುವಾಗ||

ಮನೆಯೊಳಗೆ ಕುಳಿತಿರುವೆ ಸಾಲಿಗ್ರಾಮದಲ್ಲಿ|
ಮನೆಯ ಹೊರಗೆ ಅವಿತಿರುವೆ ತುಳಸಿಯ ಮರೆಯಲ್ಲಿ||
ಮನೆಯ ಮಾಳಿಗೆ ಬೀಳುವುದುಂಟೆ ನೀನಿರುವ ಕಂಬವ ನಂಬಿ|
ಮನೆಗೆ ಕಳ್ಳರು ನುಗ್ಗುವುದುಂಟೆ ನೀ ಕೂತಿರುವ ಹೊಸಿಲ ದಾಟಿ||
ಪುಟ್ಟ ಗೋವಿನಕರುಗಳ ಜೊತೆಯಲ್ಲಾಡುತಿರುವೆ|
ಎಳೆಯ ಕಂದಮ್ಮಗಳಿಗೆ ಅಂಬೆಗಾಲನ್ನು ಇಡಿಸುತ್ತಿರುವೆ||
ಮನೆ ಮನ ದೇಹವೂ ಕೇಶವನಾಗಿರುವಾಗ|
ನಿನಗಿಂತ ಮಿತ್ರ ಬೇಕೆ ಎನಗೆ,ಉಡುಪಿಯ
ಶ್ರೀಕೃಷ್ಣನೇ,ವಾಸುದೇವನೇ||
ಅಭಿಲಾಷ್ ಟಿ ಬಿ
ತಿಪಟೂರು

೩. 
ಮುತ್ತಿನ ಸರ ,ಓಲೆಯನ್ನು ಧರಿಸಿಕೊಂಡು ಲಕ್ಷ್ಮಿದೇವಿ ಶ್ರೀಹರಿಯನ್ನು ಕುರಿತು " ಭಾಗ್ಯ" ನ್ ಮನೇಲಿ ಕುಂಕುಮಕ್ಕೆ ಕರೆದಿದ್ದಾರೆ ಎಂದು ಹೇಳಲೂ ,ಶ್ರೀಹರಿಯೂ ಅವರ ಮನೆ ಗೊಜ್ಜವಲಕ್ಕಿ ತುಂಬ ಚೆನ್ನಾಗಿರುತ್ತದೆ ಎಂದು ಲಕ್ಷ್ಮಮ್ಮನವರ ಜೊತೆಯಲ್ಲಿ ಅವನೂ ಬರುತ್ತಾನೆ ಎಂಬ ಕಲ್ಪನೆಯಲ್ಲಿ........
ಮುತ್ತಿನ ಓಲೆ ತೊಟ್ಟು, ಮುತ್ತಿನ ಮೂಗುತಿ ತೊಟ್ಟು|
ಸಿರಿದೇವಿ ಮಹಾಲಕ್ಷ್ಮೀ ಬಂದಳು,ಸಿರಿದೇವಿ ಅರಸನೂ ಬಂದನು||

ಮಾಧವಿ ಬಂದಳು,ಮಂಗಳಾಂಗಿ
ಬಂದಳು|
ಮಂದಾರ ಪರ್ವತಧರ
ಮಧುಸೂಧನನು ಬಂದನು||
ರಮಾದೇವಿ ಬಂದಿಹಳು,ರಾಮಮನೋಹರಿಯೂ ಬಂದಿಹಳು||
ರಾವಣನಿಗೆ ಬಾಣ ಹೂಡಿದ ಶ್ರೀರಾಮಚಂದ್ರನೂ ಬಂದಿಹನು||
ಪಾಲ್ಗಡಲ ಜನನಿ ಬಂದಳು,ಪನ್ನಗ ಶಯನನ ರಾಣಿ ಬಂದಳು |
ಪಾರ್ಥನಿಗೆ ಸಾರಥಿಯಾದ ಪದ್ಮನಾಭ ಶ್ರೀಕೃಷ್ಣನು ಬಂದನು||
ಹಿರಣ್ಮಯಿ ಬಂದಳು,ಹಯವದನರಾಯನೂ ಬಂದನು |
ಲೋಕಕ್ಕೆ ತಂದೆತಾಯಿಯರಾದ ಲಕ್ಷ್ಮೀನಾರಾಯಣರು ಬಂದರು||
ಆಭಿಲಾಷ್ ಟಿ ಬಿ
ತಿಪಟೂರು

೪. ಜಗಲಿ ಕಟ್ಟೆ ಎಂದರೆ ನಮಗೆ ನೆನಪಾಗುವುದು ಒಂದಷ್ಟು ಜನ ಹರಟೆ ಹೊಡೆಯುತ್ತಾ,ಕಷ್ಟ ಸುಖಗಳನ್ನು ಹಂಚಿಕೊಳ್ಳುತ್ತಾ ಕುಳಿತಿರುವುದು.ಹಾಗೆ ಶ್ರೀಮಾನ್ ನಾರಾಯಣನ ಭಕ್ತನೊಬ್ಬ ಶ್ರೀಹರಿಯನ್ನು ವೈಕುಂಠವನ್ನು ಬಿಟ್ಟು ತನ್ನ ಮನೆಯ ಜಗಲಿಯ ಮೇಲೆ ಬಂದು ಕೂರಯ್ಯ ಎಂದು ಬೇಡಿಕೊಳ್ಳುತ್ತಿದ್ದಾನೆ.
ಎಲ್ಲಿ ಅರಸಿ ಹೋಗಲಯ್ಯ,ಹರಿಯೇ|
ನಮ್ಮ ಮನೆಯ ಜಗಲಿಯ ಮೇಲೆ ಬಂದು ಕೂರಬಾರದೇನು||

ಎಲ್ಲೆಲ್ಲೂ ಇರುವನು ಹರಿ ಎಂದು ಪ್ರಹ್ಲಾದ ಹೇಳಿದ ಮಾತ್ರಕೆ|
ಕಂಬಕ್ಕೆ ಒರಗಿ ಕಷ್ಟವ ಹೇಳಿಕೊಳ್ಳಲಾಗುತ್ತದೆನಯ್ಯ|
ಅಣುವಿನಿಂದ ಮಹಾಕಾಯದಲ್ಲೂ ನೀನಿರುವ ಮಾತ್ರಕೆ|
ಕುಕ್ಕುಟಕ್ಕೆ ಬೆಣ್ಣೆ,ಚಕ್ಕುಲಿ ತಿನ್ನಿಸಲೇನಯ್ಯ||
ಆಸೆ,ಕಾಮ ತುಂಬಿರುವ ಈ ದೇಹಗಳು|
ಎಷ್ಟು ಮಂದಿ ವೈಕುಂಠಕ್ಕೆ ಬಂದವಯ್ಯ||
ಹಗಲು ಇರುಳು ಎಲ್ಲವೂ ನಿನಗೆ ಒಂದೇ ಆಗಿರುವಾಗ|
ಮನದ ಅಂಧಕಾರತೊಲಗಿಸಿ ನಿನ್ನ ಸ್ಮರಣೆ ಮಾಡುವ ಹಾಗೆ ಅನುಗ್ರಹಿಸುವಂತೆ ಬಾರೋ ಕೃಷ್ಣ||
ಅಭಿಲಾಷ್ ಟಿ ಬಿ
ತಿಪಟೂರು

೫. 
ಕಂಡೆನಾ ಕೃಷ್ಣಮೂರ್ತಿಯ|
ಕಂಡೆನಾ ಕಾಳಿಂಗನ ಮೇಲೆ ನಾಟ್ಯವಾಡಿದ ಶ್ರೀರಂಗನ||
ಬೆಣ್ಣೆಯ ಕಡೆಯುತ್ತಿದ್ದ ಯಶೋಧೆಯ ಬಳಿಗೆ
ಅಂಬೆಗಾಲಿಡುತ ಬಂದ ಶಿಶುವ ಕಂಡೆನಾ|
ಗೋಪಿಯರ ಜೊತೆಗೂಡಿ ಕಣ್ಣಮುಚ್ಚಾಲೆ ಆಡುತ್ತಿರುವ ಯಾದವನ ಕಂಡೆನಾ||
ಗೋವುಗಳ ನಡು ನಿಂತು ಕೊಳಲ|
ಊದುತ್ತಿರುವ ಮುರಳಿ ಮಾಧವನ ಕಂಡೆನಾ||
ನಡುವಲ್ಲಿ ಇದ್ದ ಬೆಣ್ಣೆಗಡಿಗೆಯ ಒಡೆಯುತ್ತಿದ್ದ ಬೆಣ್ಣೆಕೃಷ್ಣನ ಕಂಡೆನಾ|
ಮುಷ್ಟಿಕ,ಚಾಣೂರ ಜೊತೆಯಲ್ಲಿ ಯುದ್ಧವ ಮಾಡಿದ ಮಲ್ಲನ ಕಂಡೆನಾ||
ಯುದ್ಧ ಭೂಮಿಯಲ್ಲಿ ಧರ್ಮ ಬೋಧನೆ ಮಾಡುತ್ತಿದ್ದ ಸಾರಥಿಯ ಕಂಡೆನಾ|
ಉಡುಪಿಯ ಗುಡಿಯಲ್ಲಿ ತುಳಸಿಹಾರವ ಹಾಕಿನಿಂತ ಅಚ್ಯುತನ ಕಂಡೆನಾ||
ಅಭಿಲಾಷ್ ಟಿ ಬಿ
ತಿಪಟೂರು

೬. 
"ದಾಸರೆಂದರೆ ಪುರಂಧರದಾಸರಯ್ಯ " ಎಂದು ವ್ಯಾಸರಾಯರು ಅಂದೇ ಹೇಳಿದ್ದರು.ಸಮಾಜದಲ್ಲಿ ಇದ್ದ ಅಂಕು ಡೊಂಕುಗಳನ್ನು ತಮ್ಮ ಕೀರ್ತನೆಗಳ ಮೂಲಕ ಸರಿಪಡಿಸಲು ಯತ್ನಿಸಿದವರಲ್ಲಿ ಒಬ್ಬರು. ಶ್ರೀಹರಿಯನ್ನು ದಾಸರು ಕರೆದರೆ ಬಂದೇ ಬರುತ್ತಾನೆ ಎಂಬ ಪೀಠಿಕೆಯ ಮೇಲೆ ಕೆಳಗಿನ ಪದ್ಯವು ನಿಂತಿದೆ.
ಬಾರೋ ಪುರಂಧರವಿಠಲ ರಾಯನೇ|
ಪುರಂಧರರು ಕರೆದರೇನೆ ಬರಬೇಕೆನಯ್ಯ||

ಕಂಬವ ಒಡೆದು,ಕರುಳಿನ ಹಾರವ |
ಹಾಕಿಕೊಂಡ ನರಸಿಂಹ ದೇವನೇ ಬಾರೋ||
ಹಿರಣ್ಯಾಕ್ಷ,ಹಿರಣ್ಯಕಶಿಪುವನನ್ನು ಸಂಹರಿಸಿದ|
ಹಿರಣ್ಮಯಿಯ ಪ್ರಿಯನಾದ ವರಾಹ ಸ್ವಾಮಿಯೆ ಬಾರೋ||
ಕನಕರು ಕೂಗಿದ ಕರೆಯ ಕೇಳಿ|
ದರುಶನ ಬಾಗಿಲ ಬದಲಿಸಿಕೊಂಡವನೇ ಬಾರೋ|
ನಿನ್ನ ಹೆಜ್ಜೆ ಹೆಜ್ಜೆಗೂ ಪುಷ್ಪಗಂಬಳಿಯನ್ನು ಹಾಸುವೇ|
ಪಾಂಡುರಂಗ ವಿಠಲನೇ ಬಾರೋ,ಈ ದಾಸನ ಮನೆಗೆ ||
ಅಭಿಲಾಷ್ ಟಿ ಬಿ
ತಿಪಟೂರು

೭. 
"ಜಗದೊಡೆಯನಾದ ಶ್ರೀಕೃಷ್ಣನನ್ನು ಮಗನಾಗಿ ಪಡೆಯಲು ಯಶೋಧೆ ಎಷ್ಟು ಅದೃಷ್ಟವಂತೆ ಎಂದು ಎಲ್ಲರೂ ಹೇಳುತ್ತಾರೆ.ಆದರೆ ಕೃಷ್ಣನು ಯಶೋಧೆಯನ್ನು ತಾಯಿಯಾಗಿ ಪಡೆಯಲು ಎಷ್ಟು ತಪ್ಪಸ್ಸು ಮಾಡಿದ್ದನೋ? ಅಲ್ಲವೇ? ...ದೇವರು ಎಂಬುವನು ಆಕಾರವಿಲ್ಲದವನು ಎಂದು ತಿಳಿದೂ ಆತನಿಗೆ ಮಾನವ ರೂಪವನ್ನು ಕೊಟ್ಟಿದ್ದರಿಂದ ಇಂದು ಭಾರತ ಶ್ರೀಮಂತ ಸಂಸ್ಕೃತಿಯನ್ನು ಹೊಂದಲು ಕಾರಣವಾಗಿದೆ.
ಮಾನವ ರೂಪಿಯಾದ ಶ್ರೀಕೃಷ್ಣನನ್ನು ಯಶೋಧೆ ಸ್ನಾನವ ಮಾಡಿಸಿ ತೊಟ್ಟಿಲಿಗೆ ಹಾಕಿ ತೂಗುತ್ತಾ ಮಲಗಿಸುತ್ತಾಳೆ ಎಂಬ ಕವಿ ಕಲ್ಪನೆ ಈ ಕೆಳಗಿನ ಸಾಲುಗಳಲ್ಲಿ ವ್ಯಕ್ತವಾಗಿದೆ.
ಸ್ನಾನವ ಮಾಡಿಸಿ,ರಕ್ಷೆಯನಿಟ್ಟು|
ತೊಟ್ಟಿಲಲ್ಲಿ ಹಾಕಿ ಕೃಷ್ಣನ ತೂಗಿದಳು ,ಯಶೋಧೆ|
ಜಗವನ್ನೇ ತೂಗುತ್ತಿರುವ,ಲಕ್ಷ್ಮೀಕಾಂತನನ್ನು|
ಜಗದೊಡೆಯನೆಂದು ತಿಳಿಯದೆ ತೂಗುತಿಹಳು|
ಎರಡು ಪಾದಗಳಲ್ಲೆ ಇಳೆ ನಭವನ್ನು ಆಕ್ರಮಿಸಿದ|
ಪುಟ್ಟ ಪಾದದ ವಾಮನಮೂರ್ತಿಯನ್ನೇ ತೂಗಿದಳು ಯಶೋಧೆ|
ಲಾಲಿಯ ಹಾಡು ,ಜೋಗುಳದ ಪದಗಳು|
ಮುದ್ದು ಮಾತುಗಳಿಂದ ಕಂದನ ಮಲಗಿಸುತಿಹಳು|
ಸುತ್ತಲೂ ದಾನವರು,ಹಗಲು ಇರುಳೆನ್ನದೆ ಭಜಿಸುವ ಭಕ್ತರಿರುವಾಗ|
ಪದುಮನಾಭನು ಮಲುಗುವುದಿಲ್ಲ ಎಂಬುದನ್ನು ಅರಿಯದೆ |
ತೂಗುತಿಹಳು ಯಶೋಧೆ,ಕೃಷ್ಣನ ತೂಗುತಿಹಳು|
ಅಭಿಲಾಷ್ ಟಿ ಬಿ
ತಿಪಟೂರು

೮. 
ವಸುದೈವ ಕುಟುಂಬಕಂ.........
ಕಾರಣನಾದನೋ ಸಾರಥಿ|
ಗೀತೆಯ ಕೇಳಲು,ಭಾರತವ ಬರೆಯಲು||
ಸನತ್ಕುಮಾರರನ್ನು ವೈಕುಂಠದ ಬಾಗಿಲ ಬಳಿ ತಡೆಯಲು ಕಾರಣರಾರು|
ಹಿರಣ್ಯಕಶಿಪುವಿಗೆ ಹರಿಯು ಅರಿಯಾಗಲು ಕಾರಣರಾರು||
ರಾವಣನು ಸೀತೆಯನ್ನು ಅಪಹರಿಸಲು ಕಾರಣರಾರು|
ಶಿಶುಪಾಲ,ದಂತವಕ್ತ್ರ ಲೋಕಕ್ಕೆ ವಕ್ತ್ರರಾಗಲು ಕಾರಣರಾರು||
ಪುರಂದರವಿಠಲನು ಉದ್ಬವಿಸಲು ಕಾರಣನಾರು|
ಕನಕರು ಕೇಶವನನ್ನು ತಿರುಗಿಸಲು ಕಾರಣನಾರು||
ವ್ಯಾಸರಾಯರು,ರಾಘವೇಂದ್ರತೀರ್ಥರು,ವಾದಿರಾಜರು|
ಶ್ರೀಕೃಷ್ಣ,ಮೂಲರಾಮ,ಹಯವದನ ಅಂಕಿತವನ್ನು ಉಳ್ಳಲು ಕಾರಣರಾರು||
ಧರ್ಮವ ಪಾಲಿಸು,ಧರ್ಮವ ರಕ್ಷಿಸು|
ಅಂತರಂಗ ಶಕ್ತಿ ಎಂದಿಗೂ ಬತ್ತಿ ಹೋಗದು||
ಅಣುವಿನಿಂದ ಹಿಡಿದು ಮಹಾಕಾಯದಲ್ಲೂ ವಾಸುದೇವನಿರುವನು|
ದೀನ ಜನರ ಪಾಲಿಸುತ್ತ ನಿಂತಿರುವನು ತಿರುಪತಿಯ ವೆಂಕಟರಮಣ||
ಅಭಿಲಾಷ್ ಟಿ ಬಿ
ತಿಪಟೂರು

೯. 
ಹೆಸರಿಗೆ ತಕ್ಕ ಹಾಗೆ ನನ್ನ ಸೋದರತ್ತೆ ಸೀತಮ್ಮ ಕ್ಷಮಾಗುಣವುಳ್ಳವರಾಗಿದ್ದರು.ಇಂದು ಶ್ರಾವಣ ಶನಿವಾರ,ಅವರ ಮನೆಯ ಕೋಸಂಬರಿ ,ಬೇಲದ ಹಣ್ಣಿನ ಪಾನಕ ರುಚಿಗೆ ನಿಲುಕ್ಕದು.ಅದಕ್ಕೆ ಅವರು ಕೊಡುತ್ತಿದ್ದ ಉತ್ತರ "ರಾಮ ದೇವರ ಪ್ರಸಾದ ಅಲ್ಲವೇ" ಎಂದು.ಆ ಸವಿ ಕ್ಷಣಗಳು ನೆನಪಿಗೆ ಯಾಕೋ ನೆನಪಿಗೆ ಬಂದು,ರಾಮ ನಾಮ ಜಪವಾದ್ರೂ ಮಾಡೋಣ ಎಂದು ಯೋಚಿಸಿದೆ.
ರಂಗೋಲಿ ಎಳೆಯಿರೆ,ಬೇಗನೆ ಸಖಿಯರೇ|
ಶ್ರೀರಾಮರ ಉತ್ಸವ ಬರುತೀದೆ,ಸೀತಾರಾಮರ ಉತ್ಸವ ಬರುತೀದೆ|
ಬಲದಲ್ಲಿ ಲಕ್ಶ್ಮಣ,ಎಡದಲ್ಲಿ ಭರತನು|
ಜೊತೆಯಲ್ಲೇ ಕುಳಿತಿಹಳು ಮಹಾಲಕ್ಷ್ಮೀ||
ರೋಮ,ರೋಮದಲ್ಲೂ ರಾಮ ರಾಮ ಎನ್ನುತ್ತಿರುವ|
ರಾಮಭಕ್ತ ಹನುಮಂತನೂ ಇದ್ದಾನೆ|
ಧರ್ಮ ಎಂಬ ಕುದುರೆ,ನೀತಿವೆಂಬ ರಥವು|
ಜ್ಞಾನವೆಂಬ ಚಕ್ರಗಳು,ಸತ್ಯವೆಂಬ ಪ್ರಭಾವಳಿ ಶೋಭಿಸುತಿದೆ||
ಬಡವ,ಸಿರಿವಂತ ಎಂಬ ಭೇದವಿಲ್ಲದೆ|
ಎಲ್ಲರಿಗೂ ನಮಸ್ಕರಿಸುತ್ತಾ ಹೊರಟ್ಟಿದ್ದಾರೆ||
ಎಲ್ಲೋ ಕರಗಿದ್ದ ಉಪ್ಪು,ಯಾವುದೋ ಆಲೆಯಲ್ಲಿ ಮಾಡಿದ ಬೆಲ್ಲ|
ಎಲ್ಲವೂ ಕೋಸಂಬರಿ,ಪಾನಕದಲ್ಲಿ ಬೆರೆತಿಹವು|
ಜಾತಿ,ಮತ,ಭಾಷೆ ಎಲ್ಲವನ್ನೂ ಮೀರಿ ಬೆಳೆಯಬೇಕು ಎಂದು|
ಪಾನಕ ಕೋಸಂಬರಿಯನ್ನು ಹಂಚುತ್ತಾ ಸಾರುತಿಹರು||
ಅರಮನೆಯಿಂದ ಹೊರಟ ಉತ್ಸವ|
ಹಳ್ಳಿ,ಕಾಡು,ಮರುಭೂಮಿ,ನದಿತೀರದಲ್ಲೂ ಸಂಚರಿಸಿತು||
ಮುಮ್ಮೇಳ,ಹಿಮ್ಮೇಳದಲ್ಲಿ ಕೇಳುವ ಧ್ವನಿಯೊಂದೆ ಆಗಿತ್ತು|
ರಾಮ,ರಾಮ ಎಂಬ ಒಗಟ್ಟಿನ ಮಂತ್ರ|
ರಾಮ ರಾಮ ಜಯ ರಾಜ ರಾಮ|
ರಾಮ ರಾಮ ಜಯ ಸೀತಾ ರಾಮ|
ಅಭಿಲಾಷ್ ಟಿ ಬಿ
ತಿಪಟೂರು
೧೦. 
ಇಂದಿನ ಕಂಪ್ಯೂಟರ್ ಯುಗದಲ್ಲಿ ಕೃಷ್ಣನು ನನ್ನ ಜೊತೆ ಕಣ್ಣಾಮುಚ್ಚಾಲೆ ಆಡಿದಾಗ ಏನಾಯಿತು,?
ಕಣ್ಣಮುಚ್ಚಾಲೆ ಆಡಿದೆನೋ|
ಶ್ರೀರಂಗಲಕ್ಷ್ಮಿಯ ರಂಗನಾಯಕನ ಜೊತೆಗೆ|
ಮಾಧವನೆಂದು ಹಿಡಿದರೆ|
ಇಲ್ಲ ನಾನು ಅಚ್ಯುತನೆಂದು ತಪ್ಪಿಸಿಕೊಂಡನು|
ಸುಳ್ಳು ಹೇಳದಿರಯ್ಯ,ನೀ ಸತ್ಯಭಾಮೆ ರಮಣನಲ್ಲವೇ?|
ನಾ ಸೀತಾಪತಿ ಎಂದು ಕಣ್ಣು ಮಿಟುಕಿಸಿ ಓಡಿಹೋದನು|
ನಾರದರು ನುಡಿಯುವ ನಾರಾಯಣ ನೀನೆ ಅಲ್ಲವೇ?
ನಾನೊಬ್ಬ ಯಕಶ್ಚಿತ್ ಗೊಲ್ಲ ಎಂದು ಹೇಳುವುದೇನು|
ಒಂದು ಉಂಡೆ ಬೆಲ್ಲ,ಅವಲಕ್ಕಿಯನ್ನು ಹಿಡಿದು ಕುಳಿತುಕೊಂಡಾಗ|
ತುಳಸಿಯ ಮರೆಯಿಂದ ನಾನು ಕೃಷ್ಣ ಎಂದು ಓಡಿಬಂದನು|
ಅಭಿಲಾಷ್ ಟಿ ಬಿ
ತಿಪಟೂರು

೧೧. 
ಒಂದು ಹಿಡಿ ಉಪ್ಪಿನಷ್ಟು ಅವಲಕ್ಕಿ ಸಾಕು ಶ್ರೀಕೃಷ್ಣನನ್ನು ಕಾಣಲು ಎಂದು ದಾಸರು ಮೊದಲೇ ಹೇಳಿದ್ದಾರೆ,ಆದ್ರೆ ನನ್ನ ಮಡದಿ ಚಕ್ಕುಲಿ,ಒಬ್ಬಟ್ಟು ಎಲ್ಲವನ್ನು ಮಾಡಿಕೊಂಡು ಆ ರಂಗನನ್ನು ನೋಡಲು ನನ್ನನ್ನೂ ಕರೆದುಕೊಂಡು ಹೊರಟ್ಟಿದ್ದಾಳೆ ......
ನನ್ನಾಕೆ ಕರೆದಳು ಹೋಗೋಣ ಬನ್ನಿ ಎಂದು
ದೇವಕಿನಂದನ ಕೃಷ್ಣನ ನೋಡಲು|
ಕೋಡುಬಳೆ ಚಕ್ಕುಲಿ ತುಂಬಿದಳು ಡಬ್ಬಿಯಲ್ಲಿ|
ನವನೀತವನ್ನು ಹಾಕಿದಳು ಮಜ್ಜಿಗೆ ಇದ್ದ ಗಡಿಗೆಯಲ್ಲಿ|
ಒಬ್ಬಟ್ಟು,ಉಸಲಿಯನ್ನು ಕಟ್ಟಿದಳು ಮುತ್ತುಗದಲ್ಲಿ|
ಅವಲಕ್ಕಿಯನ್ನೇ ಮರೆತ್ತಿದ್ದಳು ನನ್ನ ನಲ್ಲೆ |
ಮಲ್ಲಿಗೆ ಮಲ್ಲೆ ತೋಳ್ಬ್ಂದಿಗೆಂದು|
ಕಮಲ ತಾವರೆ ಕಮಲಾಕ್ಷಿಗೆಂದು|
ಮಾಣಿಕ್ಯದ ಹಾರವೆಂದು ಸೇವಂತಿಗೆಯನ್ನು ಕಟ್ಟಿದ್ದಳು|
ತುಳಸಿಯನ್ನೆ ಮರೆತ್ತಿದ್ದಳು ನನ್ನ ಪ್ರಿಯ ನಲ್ಲೆ|
ಉಡುಪಿ,ಮಥುರಾ ಬೀದಿಗಳಲ್ಲಿ ಅಲೆದಿದ್ದಾಯಿತು|
ಗೋವೃಂದ,ರಥಬೀದಿಗಳಲ್ಲೂ ಹುಡುಕಿದ್ದಾಯಿತು|
ಗುರುವಾಯೂರಿನ ಒಡೆಯನ ಬಗ್ಗೆ ಗುರುರಾಯರನ್ನು ಕೇಳಿದಾಗ|
ಮನ ಮನದಲ್ಲೂ ನಲಿದಾಡುತ್ತಿರುವನು ಎಂದರು|
ಅಭಿಲಾಷ್ ಟಿ ಬಿ
ತಿಪಟೂರು

೧೨. 
ಹೀಗೆ ಒ0ದು ದಿನ ನಮ್ಮ ತಿಪಟೂರಿನ ಪ್ರಭಾತ್ ಕಾಫಿ ಪುಡಿ ಮು0ದೆ ಇರೋ ರಾಮಮ0ದಿರದ ರಸ್ತೆಯಲ್ಲಿ ದಾಸರೊಬ್ಬರು ಹೋಗುತ್ತಿರುವಾಗ ರಾಮಮ0ದಿರದ ಮೆಟ್ಟಿಲುಗಳ ಮೇಲೆ ಯಾರೋ ಕೊರಗುತ್ತಾ ಕುಳಿತ್ತಿದ್ದರು.ದಾಸರು ಯಾರು ಎ0ದು ನೋಡಿದರೆ ಶ್ರೀಮಾನ್ ನಾರಾಯಣ,ಆ ಸ0ದರ್ಭದಲ್ಲಿ ದಾಸರು ಶ್ರೀಹರಿಯನ್ನು ಹೇಗೆ ಸಮಾಧಾನ ಪಡಿಸಿದರೆ0ದರೆ...
ವಿರಹವೇತಕ್ಕಯ್ಯ ಶ್ರೀನಿಧಿರಾಯ ವಿರಹವೇತಕ್ಕಯ್ಯ|
ಲಕ್ಷ್ಮೀ ಕಾಣಲಿಲ್ಲ ಅ0ತ ಏನಯ್ಯಾ|
ತ್ರೇತಾಯುಗದಲ್ಲಿ ಸೀತೆಯಾಗಿ
ದ್ವಾಪರದಲ್ಲಿ ರುಕ್ಮಿಣಿಯಾಗಿ|
ನಿನ್ನ ಅರಸಿ ನಿನ್ನನ್ನು ಅರಸಿ ಬ0ದಿರಲಿಲ್ಲವೆನಯ್ಯ|
ಸಿ0ಹಮುಖವಾದರೇನು ವರಾಹವಾದರೇನ0ತೆ|
ನೀ ಸದಾ ಲಕ್ಷ್ಮಿಯ ನಾರಾಯಣನಯ್ಯ|
ಸದಾ ಲಕ್ಷ್ಮಿಯ ಧ್ಯಾನದಲ್ಲಿ ಕುಳಿತರೆ ಹೇಗಯ್ಯಾ|
ಬಾರಯ್ಯ ಮ0ತ್ರಾಲಯಕ್ಕೆ ಹೋಗೋಣಯ್ಯ,ಗುರುರಾಯರ ಸೇವೆ ಮಾಡಿ ಬರೋಣಯ್ಯ|
ಅಭಿಲಾಷ್ ಟಿ ಬಿ
ತಿಪಟೂರು



ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ