ಭಾವ ವರ್ಷಿಣಿ .....
೧.
ಕವಿತೆ " ಚಿಟ್ಟೆ "
ಬಣ್ಣದ ಚಿಟ್ಟೆ ಎಲ್ಲಿಗೆ ಹೊರಟಿರುವೆ|
ಪ್ರೇಮ ಪತ್ರವ ಕೊಡುವೆ,ತಲುಪಿಸುವೆಯ ನನ್ನ ಗೆಳತಿಗೆ||
ಉಪ್ಪರಿಗೆಯ ಕೋಣೆಯ ಕಿಟಕಿಯ ಬಳಿ|
ಕುಳಿತು ಚಂದಿರನ ಜೊತೆ ಹರಟುತಿಹಳು||
ನಿನ್ನ ರೆಕ್ಕೆಯಲ್ಲಿರುವ ವಿಧ ವಿಧ ಬಣ್ಣಗಳ|
ಹಲವು ಬಿಂದಿಗಳು ಅವಳ ಕೊಣೆಯಲ್ಲಿಹುದು||
ಹೂವಿಂದ ಹೂವಿಗೆ ಹಾರುವ ನೀನು|
ನನ್ನ ಪ್ರೇಮದ ಅಮೃತವ ಹೀರದೆ ಪತ್ರವ ತಲುಪಿಸೆ||
ಕಾಯುತ್ತಾ ಕುಳಿತಿರುವಳು ಕಂಬಕ್ಕೆ ಒರಗಿ|
ದೀಪದ ಬೆಳಕಿಗೆ ಮೈಯೊಡ್ಡಿ,ಈ ಕೃಷ್ಣನ ಧ್ಯಾನಿಸುತ್ತಾ||
೨.
ಕವಿತೆ " ದೀಪಾವಳಿ "
ಜೊತೆಯಲ್ಲಿ ಹೊರಟಿವೆವು |
ಬಾಳಿನ ಹಣತೆಯ ಹಚ್ಚಲು||
ಯಾವ ಜನುಮದ ಮೈತ್ರಿ|
ಇವಳ ಬಳಿ ನನ್ನ ಕರೆಯಿತು||
ಮಲ್ಲಿಗೆ, ಮಲ್ಲೆಯ ಇವಳ ಜಡೆಗೆ ಮುಡಿಸಿ|
ಪ್ರೀತಿಯ ಬಾಣವ ಅವಳ ಹೃದಯಕ್ಕೆ ಬೀಸಿದೆನು||
ಬಾಳಿನ ದೀಪಕ್ಕೆ ಒಲವಿನ ಸೊಡರೆಣ್ಣೆಯ ಸುರಿದು |
ಅಂಧಕಾರದ ಭವಿಷ್ಯ ನಮ್ಮದಾಗದಿರಲಿ ಎಂದು ದೀಪಗಳ ಸಾಲನ್ನು ಹಚ್ಚಿದೆವು ||
ಮನ ತುಂಬಿತು ಮನೆ ಬೆಳಗಿತು ಹೃದಯ ಹಾಡಿತು |
ಜೊತೆಯಾಗಿ ಕೈ ಹಿಡಿದು ಭವಿಷ್ಯದ ದೀಪವ ಹಚ್ಚುತಾ ಹೊರಟಿವೆವು ||
೩. ಕವಿತೆ " ಭಾವತೀರಯಾನ "
ಭಾವತೀರಯಾನದಲ್ಲಿ ಭಾವನೆಗಳ ಬೆರೆತು|
ನನ್ನ ತೋಳುಗಳಲಿ ಬಂಧಿಯಾದಳು||
ಶಬ್ದಕೋಶದಲಿ ಹೊಸಪದವ ಸೇರಿಸಬೇಕೇನೋ|
ಆ ಚೆಲುವೆಯ ನಡಿಗೆಯ ವರ್ಣಿಸಲು||
ಅಂದದ ಮುಖದ,ಸುಂದರ ನಡಿಗೆಯ|
ರಸ್ತೆಯಾಚೆಯ ದಡದಿಂದ ನಡೆದು ನನ್ನೆಡೆಗೆ ಬರುತಿಹಳು||
ಸ್ನೇಹದಿಂದ ಆರಂಭವಾದ ಹಕ್ಕಿಗಳ ಆಟವು|
ಒಲುಮೆಯು ಸ್ಪರ್ಧಿಸಿ ಪ್ರೀತಿಯು ಜಯಿಸಿತು||
ಅಕ್ಕನು ತಂದುಕೊಟ್ಟ ಅಕ್ಕಸಾಲಿಗ ಮಾಡಿಕೊಟ್ಟ ಉಂಗುರವ|
ನಿಶ್ಚಿತಾರ್ಥದ ದಿನ ನಿಶ್ಚಯಿಸಿದಂತೆ ತೊಡಿಸಿದನು||
೪. ಕವಿತೆ -"ಬಾಲೆ"
ತಾರೆಗಳ ಎಣಿಕೆಯ ಮಾಡಲಾಗುತ್ತಾ|
ನನ್ನ ಅವಳ ಪ್ರೀತಿಯಾಳವ ನೋಡಲಾಗುತ್ತಾ||
ಬಾಳಿನ ದೋಣಿಯಲ್ಲಿ ಒಬ್ಬಂಟಿಗನಾಗಿದ್ದ ಅಂಬಿಗನಿಗೆ|
ಜೊತೆಯಾಗಿ ಬರುವುನೆಂದೆ ಏರಿದಳು ದೋಣಿಯ||
ಕೊರಡು ಉರಿಯುತ್ತಿದ್ದ ಈ ಹೃದಯದಲ್ಲಿ|
ತಂಗಾಳಿಯ ಬೀಸಿದಳು ಆ ಬಾಲೆ||
ಬಾಲೆಯ ಜೊತೆಗೂಡಿ ಸಾಗರದಂಚಿನಲ್ಲಿ|
ಗುಬ್ಬಚ್ಚಿಯ ಗೂಡನು ಕಟ್ಟಿದೆನು|
ಚಿಲಿಪಿಲಿ ಎನ್ನುತ್ತಾ ಪ್ರೇಮರಾಗವ ಹಾಡುತ್ತಾ|
ಬಾನಿನ ಅಂಗಳದಲ್ಲಿ ಹಾರಾಡಿದೆವು ,ಗೂಡ ಸೇರಿದೆವು||
ಪುಟ್ಟ ಹೆಜ್ಜೆ ಇಡುತ,ಕೈಯ ಜೊತೆಯಲಿ ಹಿಡಿದು|
ಸಾಗರದ ದಡದಲ್ಲಿ ವಿಹರಿಸಿತ್ತಿದ್ದೆವು||
ಈ ಬಾಲ ,ಆ ಬಾಲೆಯರ ಸಂಗದ ಮೇಲೆ ಮತ್ಸರಗೊಂಡ ಚಂದ್ರನು|
ಸಾಗರದ ಆಲೆಯ ಉಕ್ಕೆರಿಸಿ ನಮ್ಮೆಡೆಗೆ ತಳ್ಳುತಿಹನು||
೫. ಕವಿತೆ -"ಗುಡಿ"
ಅಂತರಂಗದ ಭಾವನೆಗಳು ಬೆಸೆದವು|
ಅಂತರಾಳದ ಒಲುಮೆ ಚಿಮ್ಮಿತು ||
ಗುಡಿಯ ಮೆಟ್ಟಿಲುಗಳ ಜೊತೆಯಾಗಿ ಹತ್ತುತಿದ್ದೆವು|
ದಾರಿಹೋಕನೋರ್ವ ಜೋಡಿ ಚೆನ್ನವೆಂದನು||
ಸ್ನೇಹಿತೆಯ ಜೊತೆಯ ಸ್ನೇಹ ಆ ಕ್ಷಣವೇ ಮುರಿದು ಬಿದ್ದಿತು|
ಗುಡಿಯ ದೇವರು ಹರಸಿದನು,ಸ್ನೇಹದಾಚೆಗಿನ ಪ್ರೀತಿ ನನ್ನ ಪಾಲಾಯಿತು||
ನವಿಲಿನ ಹಾಗೆ ಕುತ್ತಿಗೆಯ ತಿರುಗಿಸುವ ನನ್ನ ಹುಡುಗಿ|
ಕ್ಷಣ ಕ್ಷಣಕ್ಕೂ ಮುಂಬರುತ್ತಿದ್ದ ತನ್ನ ಮುಂಗುರುಳನ್ನು ಹಿಂದಕ್ಕೆ ಸರಿಸುತಿಹಳು||
ಒಡನೆಯೆ ಸ್ತಬ್ದನಾಗಿ ಒಂದು ಹೆಜ್ಜೆ ಹಿಂದೆ ನಾನು ಸರಿಯಲು|
ದೂರ ಸರಿಯಲೆಂದೇನು ನಾವು ಜೊತೆಯಾಗಿದ್ದೆಂದು ಕೋಪಗೊಂಡಳು||
೬ . ಕವಿತೆ -"ಸ್ನೇಹ "
ಸ್ನೇಹ ಹಸ್ತವ ಚಾಚಿ,ಪ್ರೀತಿಯ ಮಳೆ ಕರೆದು |
ನನ್ನ ಹೃದಯದಲ್ಲಿ ಬಚ್ಚಿಟ್ಟುಕೊಂಡಿರುವ ಗೆಳತಿಯೇ,ಹೇಗೆ ಮರೆಯಲೇ ನಿನ್ನ||
ನಿನ್ನ ಅಂದದ ಚಂದದ ಮೊಗವ ನೋಡಿ|
ಹುಣ್ಣಿಮೆಯ ಚಂದಿರನು ಮೋಡಗಳಲಿ ಮರೆಯಾದನು||
ಹಮ್ಮೆಯಿಂದ ಕಂಪು ಬೀರುತ್ತಿದ್ದ ಮಲ್ಲಿಗೆಯೂ|
ನಿನ್ನ ಮಧು ಮಾತನು ಕೇಳಿ ಮಂಕಾಯಿತು||
ಬೆಟ್ಟದ ತುದಿಯಲ್ಲಿ ಜೋಡಿಹಕ್ಕಿ ಹಾರುವುದ ನೋಡುತ್ತಾ ನಿಂತಿದ್ದೆವು|
ಮಾತು ಮರೆತೆವು,ಮೌನದಾಚೆಗಿನ ಒಲುಮೆ ಕಣ್ತುಂಬಿತು||
ಕಣ್ಣು,ಕಣ್ಣು ಸೇರಿತು,ಭಾವಗೀತೆ ಮೂಡಿತು|
ಸೂರ್ಯನಿರುವವರೆಗೆ ಅವಳ ಪ್ರೀತಿಯ ಚಿಲುಮೆ ಬತ್ತದು
ಎಂದು ಅರಿವಾಯಿತು||
೭. ಕವಿತೆ -"ಭಾವ ವೀಣೆ"
ದನಿಯಾದಳು ನನ್ನ ಗೆಳತಿ|
ನನ್ನ ದಮನಿಗಳ ಭಾವಾಂತರಂಗದಲಿ||
ಒಲವಿನ ಹಾದಿಯಲ್ಲಿ ನಡೆದು ಹೋಗುತ್ತಿದ್ದೆವು|
ಒಡನೆಯೇ ಕೈ ಹಿಡಿದು ನನ್ನ ಎಳೆದಳು||
ಕಣ್ಣಿನ ಹುಬ್ಬನ್ನು ಎರಿಸಿ ಏನೆಂದು ನಾನು ಕೇಳಲು|
ತನ್ನ ತಲೆಯ ನನ್ನ ಎದೆಯ ಮೇಲಿಟ್ಟು ಕಣ್ಣಿರುಗರೆದಳು||
ಸತ್ಯದಾಚೆಗಿನ ಪ್ರೀತಿ,ಬೆಳಕಿನೊಳಗಿರುವ ನಂಬಿಕೆ|
ಎರಡು ಹೃದಯದ ಭಾವಗಳು ಬೆರೆತಿಹವು|
ಚೈತ್ರಮಾಸದ ಉರಿಬಿಸಿಲಿನಲ್ಲೂ ಸೋತ ಹೃದಯಗಳಲ್ಲಿ|
ಭಾವ ವೀಣೆ ನುಡಿಯಿತು,ಒಲುಮೆಯ ನದಿ ಹರಿಯಿತು,ಜೊತೆಯಾಗಿ ನಡೆದವು||
೮. ಕವಿತೆ -"ಕನಸಿನಲ್ಲಿ ಮದುವೆ"
ಜೀವದ ಗೆಳತಿ ಜೊತೆಯಾದಳು|
ಸಂಸಾರವೆಂಬ ಬಾಳಿನ ನೌಕೆಗೆ||
ಸೋದರತ್ತೆಯ ಮಗಳಲ್ಲ,ವಧು ಪರೀಕ್ಷೆಗೂ ಹೋಗಲಿಲ್ಲ|
ಹುಡುಗ ಬರುತ್ತಿಹನೆಂದು ನಾಚಿ ಕೋಣೆಯೊಳಗೂ ಓಡಿರಲಿಲ್ಲ||
"ಶ್ರೀನಗರ" ಬಸ್ಟಾಂಡನಲ್ಲಿ ಒಟ್ಟಿಗೆ ಬಸ್ ಹತ್ತುತ್ತಿದ್ದೆವು,ಕಂಡಕ್ಟರ್ ರೈಟ್ ಹೇಳುತ್ತಿದ್ದ|
ಎಂದೋ ಮಿಲನಗೊಂಡಿದ್ದ ಮನಸ್ಸುಗಳಿಗೆ ಕುಟುಂಬಗಳೂ ರೈಟ್ ಎಂದವು||
ಇದ್ದಿಲಿನ ಮಸಿಗಿಂತಲೂ ಕಪ್ಪಲೇ ಎಂದು ಗೆಳತಿ ಕೇಳಲೂ|
ಹೃದಯದಲ್ಲಿ ಅಂತಹದೇನು ಕಾಣಲಿಲ್ಲವೆಂದಳು||
ತಿಪಟೂರಿನ ತನಕ ಹೋಗ್ಬೆಕಲ್ಲವೇ ಎಂದು ಅಜ್ಜಿ ಗೋಗರೆದಾಗ|
ಶ್ರೀರಾಮನಂತಹವನಿಗಾಗಿ ಹುಬ್ಬಳ್ಳಿಗೂ ಹೋಗಲೂ ಸಿದ್ಧವೆಂದಳು||
ರೇಷಿಮೆ ಸೀರೆ,ಮಗುಟಗಳಿಗೆ ಪುರೋಹಿತರು ಗಂಟು ಹಾಕಿದರು|
ನನ್ನ ಹೆಜ್ಜೆಯನ್ನೆ ಅನುಸರಿಸುತ್ತಾ ಅಗ್ನಿ ದೇವನಿಗೆ ನಮಸ್ಕರಿಸಿದಳು||
ಸಪ್ತಪದಿ ತುಳಿದೆವು,ಭೂಮದ ಊಟದಲ್ಲಿ ಜೊತೆಯಾಗಿ ಕುಳಿದೆವು|
"ಸಾರ್ ಮೆಜೆಸ್ಟಿಕ್ ಬಂತು " ಎಂದು ಕೂಗಿ ಕನಸಿನ ಮದುವೆಯನ್ನೂ ಕಂಡಕ್ಟರ್ ಹಾಳುಮಾಡಿದ||
ಆಭಿಲಾಷ್ ಟಿ ಬಿ
ತಿಪಟೂರು








ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ