ಶುಕ್ರವಾರ, ಆಗಸ್ಟ್ 18, 2017

ನಾರಾಯಣಪ್ಪನ ದೋಸೆ ಹೋಟೆಲ್......

ಸುಮಾರು ವರುಷಗಳ ಹಿಂದೆ,ಲಕ್ಷೀಪುರವೆಂಬ ಹಳ್ಳಿಯಲ್ಲಿ ನಾರಾಯಣಪ್ಪನೆಂಬುವನು ದೋಸೆ ಹೋಟೆಲ್ ಅನ್ನು ನಡೆಸುತ್ತಿದ್ದನು.ಊರಿನ ಜನ ಸಂಜೆಯಾಗುವುದೇ ಕಾಯುತ್ತಿದ್ದರು,ನಾರಾಯಣಪ್ಪನ ಹೋಟೆಲ್ ನ ಬಿಸಿ ಬಿಸಿ ಮಸಾಲೆ ದೋಸೆ,ಬೆಣ್ಣೆ ದೋಸೆ,ರವೆ ದೋಸೆ,ನೀರು ದೋಸೆಗಳನ್ನು ಸವಿಯಲು." ಇಂಥ ಬಾಳ ರುಚಿಯಿರೋ ದ್ವಾಸಿನ ನಾ ಎಲ್ಲೂ ತಿಂದಿಲ್ಲಾ ನೋಡಪ್ಪಾ" ಅಂತ ದೋಸೆ ತಿಂದವರು ಹೇಳುತ್ತಿದ್ದರು.ಅಂಥಾ ಸವಿಯಾದ ರುಚಿಯಾದ ಶುದ್ಧವಾದ ದೋಸೆಯನ್ನು ನಾರಾಯಣಪ್ಪ ಸ್ವತ: ತಾನೇ ಮಾಡುತ್ತಿದ್ದನು ಹಾಗೂ ಅವನ ಜೀವನವು ಹೋಟೆಲ್ ನಿಂದ ಬಂದ ಹಣದಿಂದಲೇ ನಡೆಯುತಿತ್ತು.

ನಾರಾಯಣಪ್ಪನಿಗೆ ಬರುಬರುತ್ತಾ ವಯಸ್ಸು ಏರುತ್ತಾ ಹೋಯಿತು .ಆದ್ದರಿಂದ ಅವನು ತನ್ನ ಹೋಟೆಲ್ ಮಾಲಿಕತ್ವವನ್ನು ತನ್ನ ಇಬ್ಬರು ಮಕ್ಕಳಾದ ರಾಮ ಮತ್ತೆ ಶ್ಯಾಮನಿಗೆ ಕೊಡಲು ನಿರ್ಧರಿಸಿದನು.ಅದಕ್ಕೂ ಮೊದಲು ನಾರಾಯಣಪ್ಪ ತನ್ನ ಇಬ್ಬರು ಮಕ್ಕಳಲ್ಲಿ ಹೋಟೆಲ್ ನಡೆಸುವುದಕ್ಕೆ ಯಾರು ಸಮರ್ಥರು ಎಂದು ತಿಳಿಯಬೇಕೆಂದು ನಿರ್ಧರಿಸಿದನು.

ನಾರಾಯಣಪ್ಪ ಒಂದು ದಿನ ತನ್ನ ಇಬ್ಬರೂ ಮಕ್ಕಳನ್ನು ಕರೆದು " ಮಕ್ಕಳ,ನನಗೆ ವಯಸ್ಸಾಯಿತು,ಈ ಖಾನಾವಳಿಯನ್ನು ನಿಮ್ಮಿಬ್ಬರ ಸುಪರ್ದಿಗೆ ಕೊಡಲು ನಿರ್ಧರಿಸಿದ್ದೇನೆ.ಅದಕ್ಕೂ ಮೊದಲು ,ನಾನು ರುಚಿಯಾಗಿ ದೋಸೆ ತಯಾರಿಸುವ. ವಿಧಾನವನ್ನು ನಿಮಗೆ ಹೇಳುತ್ತೇನೆ.ನೀವು ಬೇರೆ ಬೇರೆ ಊರುಗಳಲ್ಲಿ ಒಂದು ವರುಷ ವ್ಯಾಪಾರ ಮಾಡಿ,ಯಾರು ಹೆಚ್ಚು ಆದಾಯ ತರುತ್ತೀರೋ ,ಅವರಿಗೆ ನನ್ನ ಹೋಟೆಲ್ ನ ಜವಾಬ್ದಾರಿಯನ್ನು ವಹಿಸುತ್ತೇನೆ " ಎಂದು ಹೇಳಿದನು.ನಾರಾಯಣಪ್ಪ ತನ್ನ ಇಬ್ಬರೂ ಮಕ್ಕಳಿಗೂ ವಿಧ ವಿಧವಾಗಿ ರುಚಿ ರುಚಿಯಾಗಿ ದೋಸೆ ಮಾಡುವುದನ್ನು ಹೇಳಿಕೊಟ್ಟನು.
ತಂದೆಯಿಂದ ದೋಸೆ ಮಾಡುವುದನ್ನು ಕಲಿತ ರಾಮ ಮತ್ತೆ ಶ್ಯಾಮ ಬೇರೆ ಬೇರೆ ಊರುಗಳಲ್ಲಿ ದೋಸೆ ಹೋಟೆಲ್ ನ್ನು ಆರಂಭಿಸಿದರು.ಸುಮಾರು ಒಂದು ತಿಂಗಳ ಕಾಲ ಇಬ್ಬರ ಹೋಟೆಲ್ ನಲ್ಲೂ ಜನವೋ ಜನ ,ಇದನ್ನು ಕಂಡ ನಾರಾಯಣಪ್ಪನಿಗೂ ಆನಂದವೂ ಆಯಿತು.ಆದರೆ ಬರುಬರುತ್ತಾ ಶ್ಯಾಮನ ಹೋಟೆಲ್ ನಲ್ಲಿ ಜನವೇ ಇರುತ್ತಿರಲಿಲ್ಲ,ಇದ್ದರೆ  ಒಬ್ಬರೋ ಇಬ್ಬರೋ .ಆದರೆ ರಾಮನ ಹೋಟೆಲ್ ನಲ್ಲಿ ಮಾತ್ರ ಜನ ಕಿಕ್ಕಿರಿದು ತುಂಬಿರುತ್ತಿದ್ದರು.ಶ್ಯಾಮನ ಹೋಟೆಲ್ ನಲ್ಲಿ ಗಿರಾಕಿಗಳು ಯಾಕೆ ಕಡಿಮೆಯಾದರು ಎಂಬುದನ್ನು ತಿಳಿಯಲು ನಾರಾಯಣಪ್ಪ ಶ್ಯಾಮನ ಹೋಟೆಲ್ಗೆ ಒಮ್ಮೆ ಮಾರುವೇಷದಲ್ಲಿ ಹೋದನು.ನಾರಾಯಣಪ್ಪನು ಒಂದು ದೋಸೆಯನ್ನು ತೆಗೆದುಕೊಂಡು ತಿನ್ನುತ್ತಾ ಕುಳಿತ್ತಿದ್ದನು.ಅಲ್ಲೇ ಹತ್ತಿರದಲ್ಲಿ ದೋಸೆ ತಿನ್ನುತ್ತಿದ್ದ ಹೆಂಗಸೊಂದು ಶ್ಯಾಮನನ್ನು ಕುರಿತು " ತಮ್ಮಾ, ಬಾಳ ಛಲೋ ಮಾಡಿದ್ಯಾ ದೋಸೆನಾ " ಅಂದಿದ್ದೆ ತಡ ,ಶ್ಯಾಮ ಆ ಹೆಂಗಸಿನ ಬಳಿ ಬಂದು " ಅಕ್ಕವ್ರಾ,ಇದ್ ನಮ್ಮಪ್ಪಾವ್ರ ಹೇಳ್ ಕೊಟ್ಟಿದ್ರಿ,ಇದ್ ಏನ್ ಶಾನ ಕಷ್ಟ್ ಇಲ್ರಿ,ನೀವೂ ಮನಿಯಾಗ ಮಾಡ್ಬೋದ್ ನೋಡ್ರಿ " ಎಂದು ಹೇಳುತ್ತಾ ತನ್ನ ತಂದೆ ರುಚಿಯಾಗಿ ದೋಸೆಮಾಡಲು ಹೇಳಿಕೊಟ್ಟ ಸೂತ್ರವನೆಲ್ಲ ಹೆಂಗಸಿಗೆ ವಿವರಿಸಿದ.
ನಾರಾಯಣಪ್ಪನಿಗೆ ಶ್ಯಾಮನ ಹೋಟೆಲ್ ನ ಆದಾಯ ಯಾಕೆ ಕುಸಿಯಿತು ಎಂಬುದನ್ನು ಅರಿಯಲು ಹೆಚ್ಚು ಸಮಯ ಬೇಕಾಗಲಿಲ್ಲ." ಹಿಂಗಾ  ಬಂದರವರಿಗೆಲ್ಲ ದೋಸೆ ಮಾಡದ ಹೇಳ್ಕೊಟ್ರ,ಅವ್ರ ಮನೀಗಾ ಮಾಡ್ಕಂಡು ತಿನ್ತಾರಾ,ಇನ್ ಖಾನಾವಳಿಗ್  ಯಾಕ್ ಬರ್ತಾರ ,ಅಷ್ಟು ತಿಳಿಯಂಗಿಲ್ಲ,ಮಂಗನಂತದು " ಎಂದು ಶ್ಯಾಮನನ್ನು ಮನದಲ್ಲೇ ನಾರಾಯಣಪ್ಪ ಹಳಿದುಕೊಂಡನು.ತನ್ನ ಹೋಟೆಲ್ ಮಾಲಿಕತ್ವವನ್ನು ರಾಮನಿಗೆ ಕೊಡಲು ನಿರ್ಧರಿಸಿದನು.

ಆದ್ದರಿಂದ ಓದುಗರೇ,ತರಬೇತಿ ಎಂದಿಗೂ ಶಿಕ್ಷಣವಾಗುವುದಿಲ್ಲ,ಶಿಕ್ಷಣದ ಜೊತೆಯಲ್ಲಿ ವ್ಯವಹಾರ ಜ್ಞಾನ,ಲೋಕದ ಸೂಕ್ಷ್ಮಗಳೂ ಅರಿವಿರಬೇಕು.

ಅಭಿಲಾಷ್ ಟಿ ಬಿ
ತಿಪಟೂರು


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ